ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸ್ನಲ್ಲಿ ಮಾತನಾಡಿರುವ ವಿಡಿಯೋವನ್ನು ತಿರುಚಲಾಗಿದೆ. ಈ ಮೂಲಕ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ದಿನ (ಬುಧವಾರ) ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದ ಸಂದರ್ಭದಲ್ಲಿ ನಾನು ಮತ್ತು ಸಿದ್ದರಾಮಯ್ಯ ಅವರು ಹಾಗೂ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದೆವು. ಅಲ್ಲಿ ಹಲವು ರಾಜಕೀಯ ಚರ್ಚೆ ನಡೆಯುತ್ತಿತ್ತು. ಇದರ ನಡುವೆ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರೂ ಆಗಮಿಸಿದ್ದರು. ಅಲ್ಲಿ ಜನರಿಗೆ ಹಣ ನೀಡಿ ಸೇರಿಸಲಾಗಿದೆ ಎಂದು ಚರ್ಚೆ ನಡೆಯುತ್ತಿತ್ತು.
ಈ ಕುರಿತು ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದರು. ಅವರು ಚುನಾವಣೆ ಬಂತೆಂದರೆ ಬಿಜೆಪಿಯವರು ಪ್ರತಿ ಒಬ್ಬರಿಗೂ 500 ರೂಪಾಯಿ ಕೊಟ್ಟು ಜನ ಸೇರಿಸುತ್ತಾರೆ ಎಂದು ಮಾತನಾಡಿದ್ದರು. ಈ ರೀತಿ ಹೇಳಿದ್ದ ವಿಡಿಯೋವನ್ನು ವ್ಯವಸ್ಥಿತವಾಗಿ ತಿರುಚಿ ಅಪಪ್ರಚಾರ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.