ಬೆಳಗಾವಿ:ಗಡಿಯಲ್ಲಿ ಭಾಷಾ ಸೌಹಾರ್ಧತೆಗೆ ಧಕ್ಕೆ ತರುವ ದುರುದ್ದೇಶದಿಂದ ಕರ್ನಾಟಕದೊಳಗೆ ನುಗ್ಗುವ ಶಿವಸೇನೆ ಕಾರ್ಯಕರ್ತರ ಯತ್ನವನ್ನು ಬೆಳಗಾವಿ ಪೊಲೀಸರು ವಿಫಲಗೊಳಿಸಿದರು.
ಬೆಳಗಾವಿಯ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜಸ್ತಂಭ ಅಳವಡಿಕೆಗೆ ಶಿವಸೇನೆ ವಿರೋಧ ವ್ಯಕ್ತಪಡಿಸಿದ್ದು, ಧ್ವಜಸ್ತಂಭ ತೆರವು ಮಾಡಬೇಕು ಇಲ್ಲವೇ ಪಾಲಿಕೆ ಎದುರು ಭಗವಾಧ್ವಜ ಅಳವಡಿಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರದ ಶಿವಸೇನೆ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು.
ಶಿನ್ನೋಳಿ ಗ್ರಾಮದ ಮಾರ್ಗವಾಗಿ ಬೆಳಗಾವಿ ಪ್ರವೇಶಿಸಲು ಶಿವಸೇನೆ ಮುಂದಾಗಿದ್ದರು. ಆದರೆ ಗಡಿಯಲ್ಲಿ ಬೆಳಗಾವಿ ಪೊಲೀಸರ ವ್ಯಾಪಕ ಭದ್ರತೆ ಇತ್ತು. ಕರ್ನಾಟಕ ಪ್ರವೇಶಕ್ಕೆ ಶಿವಸೇನೆ ಮುಖಂಡರು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು.
ಇದನ್ನೂ ಓದಿ:ಗಡಿಯಲ್ಲಿ ಶಿವಸೇನೆ ಹೈಡ್ರಾಮಾ: ಬೂದಿ ಮುಚ್ಚಿದ ಕೆಂಡವಾದ ಬೆಳಗಾವಿ
ಈ ವೇಳೆ ಪೊಲೀಸರ ಜೊತೆ ಶಿವಸೇನೆಯ ಕಾರ್ಯಕರ್ತರು ವಾಗ್ವಾದಕ್ಕೆ ಮುಂದಾದರು. ಎಷ್ಟೇ ಪ್ರಯತ್ನಿಸಿದರೂ ಶಿವಸೇನೆ ಯತ್ನ ವಿಫಲವಾಯಿತು. ಹೀಗಾಗಿ ಶಿನ್ನೋಳಿ ಗ್ರಾಮದ ರಸ್ತೆ ಮೇಲೆ ಅರ್ಧ ಗಂಟೆ ಕಾಲ ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರದಿಂದ ಬೆಳಗಾವಿಗೆ ಆಗಮಿಸುತ್ತಿದ್ದ ನೂರಾರು ವಾಹನಗಳು ಕಿಲೋಮೀಟರ್ಗಟ್ಟಲೇ ನಿಂತಿದ್ದವು. ಪೊಲೀಸರ ದಿಟ್ಟತನಕ್ಕೆ ಹೈರಾಣಾದ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ಮೊಟಕುಗೊಳಿಸಿ ಗಡಿಯಿಂದ ಕಾಲ್ಕಿತ್ತರು.
ಅನುಮತಿ ನಿರಾಕರಣೆ
ಬೆಳಗಾವಿಯಲ್ಲಿಂದು ಶಿವಸೇನೆ, ಎಂಇಎಸ್ ಹಾಗೂ ಎನ್ಸಿಪಿ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಱಲಿ ನಡೆಸಲು ಉದ್ದೇಶಿಸಿದ್ದರು. ಅಲ್ಲದೆ ಮಹಾರಾಷ್ಟ್ರ ನಾಯಕರಿಗೂ ಆಹ್ವಾನ ನೀಡಿದ್ದರು. ಆದರೆ ಈ ಱಲಿಗೆ ನಗರದ ಪೊಲೀಸರು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಗಡಿಯಲ್ಲೇ ಶಿವಸೇನೆ ಕಾರ್ಯಕರ್ತರು ಮೊಸಳೆ ಕಣ್ಣೀರು ಸುರಿಸಿ, ಹಿಂದಿರುಗಿದರು.