ಬೆಳಗಾವಿ: ಬಿಬಿಎಂ ಚುನಾವಣೆ ಬಗ್ಗೆ ಮಾಹಿತಿ ಬಂದಿದ್ದು, ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಬಿಎಂ ಚುನಾವಣೆ ಬಗ್ಗೆ ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ವಿಶೇಷ ಸ್ಥಾನಮಾನ ನೀಡುವುದಕ್ಕಾಗಿ ಈಗಿರುವ ಕೆಎಂಸಿ ಆ್ಯಕ್ಟ್ ಬದಲಾಯಿಸಬೇಕಿದೆ.
ಹೀಗಾಗಿ ಮುಂಬರುವ ದಿನಗಳಲ್ಲಿ ಬೆಂಗಳೂರಿಗಾಗಿಯೇ ಪ್ರತ್ಯೇಕ ಕಾಯ್ದೆ ತಂದು ಅಭಿವೃದ್ಧಿ ಮಾಡುವ ಯೋಚನೆ ಇದೆ. ಈ ಕಾಯ್ದೆ ಬಗ್ಗೆ ಪರಿಶೀಲನೆ ನಡೆಸಿದ ಮೇಲೆ ಬಿಬಿಎಂಪಿ ಚುನಾವಣೆ ನಡೆಸಲಾಗುವುದು ಎಂದರು.
ಕರ್ನಾಟಕ ಬಂದ್ ಇಲ್ಲ :ನಾಳೆ ಕರ್ನಾಟಕ ಬಂದ್ ಇಲ್ಲ. ಆದ್ರೆ, ವಾಟಾಳ್ ನಾಗರಾಜ್ ದಿನನಿತ್ಯ ಕೇವಲ ಬಂದ್, ಬಂದ್, ಬಂದ್ ಅಂತಾರೆ. ಆದ್ರೆ, ಅದ್ಯಾವುದೂ ಕೂಡ ನಡೆಯಲ್ಲ ಎಂದರು. ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದಾರೆ.
ಒತ್ತಾಯಪೂರ್ವಕ ಬಂದ್ ಮಾಡದಂತೆ ಕೋರ್ಟ್ ಕೂಡ ತಿಳಿಸಿದೆ. ಹೀಗಾಗಿ, ಯಾರಾದ್ರೂ ಒತ್ತಾಯಪೂರ್ವಕ ಬಂದ್ ಮಾಡಿಸಿದ್ರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರ ನೆರೆ ಪರಿಹಾರ ನೀಡುತ್ತಿಲ್ಲ ಎಂಬ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಸ್ತುತ ಹಾಗೂ ಕಳೆದ ವರ್ಷದಲ್ಲಾದ ಮಳೆಯಿಂದ ಕೇವಲ ನೀರು ನುಗ್ಗಿದ್ದಕ್ಕಾಗಿ ಹತ್ತು ಸಾವಿರ ಹಣ ನೀಡಲಾಗಿದೆ. ಇನ್ನು, ಮನೆಗಳನ್ನು ಕಟ್ಟಲು ಹಂತ ಹಂತವಾಗಿ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ ಮೊದಲ ಕಂತಿನಲ್ಲಿ 1 ಲಕ್ಷ ರೂ. ಹಣವನ್ನು ಸಾಕಷ್ಟು ಜನರಿಗೆ ನೀಡಲಾಗಿದೆ.
ಎರಡನೇ, ಮೂರನೇ ಹಾಗೂ ನಾಲ್ಕನೇ ಕಂತಿನ ಹಣ ಬಿಡುಗಡೆ ಮಾಡಲು ಸಮಸ್ಯೆ ಇಲ್ಲ. ಸಂತ್ರಸ್ತರು ಯಾವಾಗ ಮನೆಗಳ ನಿರ್ಮಾಣ ಕಾರ್ಯ ಮುಗಿಸುತ್ತಾರೋ ಆಗ ತ್ವರಿತವಾಗಿ ಪರಿಹಾರ ಸಿಗುತ್ತೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಹಿತಿ ಇಲ್ಲದೆ ಮಾತನಾಡುತ್ತಿದ್ದಾರೆ ಎಂದರು.
ಈ ಸುದ್ದಿಯನ್ನೂ ಓದಿ:ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ನಡೆಸಲು ಸಿದ್ಧ: ಬಿಬಿಎಂಪಿ ಆಯುಕ್ತ
ಅಗಸ್ಟ್-ಸೆಪ್ಟೆಂಬರ್ನಲ್ಲಿ 3,122 ಮನೆಗಳಿಗೆ 11.29 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲೇ ಬೆಳೆ ಹಾನಿಯಾದವರ ಪೈಕಿ 66 ಸಾವಿರ ರೈತರನ್ನು ಗುರುತಿಸಲಾಗಿದೆ. 54.99 ಕೋಟಿ ರೂ. ಹಣ ಪರಿಹಾರ ಬಿಡುಗಡೆ ಆಗಿದೆ.
ಇನ್ನೂ 2ನೇ ಕಂತಿನಲ್ಲಿ, ಬಿದ್ದಿರುವ ಮನೆಗಳಿಗೆ 7 ಕೋಟಿ 90 ಲಕ್ಷ ರೂ. ಅನುದಾನ ಕೊಡಲಾಗಿದೆ. ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ 98 ಕೋಟಿ ರೂ. ಹಣ ಇದೆ. ರಾಜ್ಯದಲ್ಲಿ 25 ಜಿಲ್ಲೆಗಳಲ್ಲಿ 180 ತಾಲೂಕನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಹೀಗೆ ಹಂತ ಹಂತವಾಗಿ ಪರಿಹಾರ ಒದಗಿಸುತ್ತಿದ್ದೇವೆಂದು ಮಾಹಿತಿ ನೀಡಿದರು.