ಬೆಳಗಾವಿ/ಅಥಣಿ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಬಹುತೇಕ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಮಲಪ್ರಭಾ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆ ರಾಮದುರ್ಗ ತಾಲೂಕಿನ ಅನೇಕ ಹಳ್ಳಿಗಳು ಜಲಾವೃತವಾಗಿವೆ.
ಬೆಳಗಾವಿಯಲ್ಲಿ ಮತ್ತೆ ವರುಣಾರ್ಭಟ... ಹಲವು ಮನೆಗಳು ಜಲಾವೃತ - ಮಳೆಗೆ ಅಥಣಿ ಶಾಲೆ ಮುಳುಗಡೆ
ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಅಲ್ಲದೆ ಹಲವು ಗ್ರಾಮಗಳು ಜಲಾವೃತಗೊಂಡಿವೆ.
ಭಾರೀ ಮಳೆಯಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ಮಲಪ್ರಭಾ ಜಲಾಶಯದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರ ಬಿಡಲಾಗುತ್ತಿದೆ. ಹೀಗಾಗಿ ರಾಮದುರ್ಗ ತಾಲೂಕಿನ ಹಲವು ಗ್ರಾಮಗಳಿಗೆ ಮೂರನೇ ಬಾರಿಗೆ ಪ್ರವಾಹ ಭೀತಿ ಎದುರಾಗಿದೆ. ನವಿಲುತೀರ್ಥ ಡ್ಯಾಂನಿಂದ 22 ಸಾವಿರ ಕ್ಯೂಸೆಕ್ ನೀರನ್ನು ಮಲಪ್ರಭಾ ನದಿಗೆ ಹರಿಬಿಟ್ಟ ಹಿನ್ನೆಲೆ ರಾಮದುರ್ಗ ಪಟ್ಟಣ ಮತ್ತು ಹಲವು ಗ್ರಾಮಗಳು ಜಲಾವೃತಗೊಂಡಿವೆ. ರಾಮದುರ್ಗದ ಪಟ್ಟಣದ ಹೊರ ವಲಯದ ಪ್ರೇರಣಾ ಶಾಲೆಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಆಗಿದೆ. ಸುರೇಬಾನ್ ಗ್ರಾಮದ ಪೊಲೀಸ್ ಠಾಣೆ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗದ ತಾಲೂಕಿನ ಸುರೇಬಾನ್, ಹಂಪಿಹೊಳಿ, ಸುನ್ನಾಳ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ.
ಅಥಣಿ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ಪರಿಣಾಮವಾಗಿ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಎಲ್ಲಮ್ಮ ದೇವಿ ದೇವಸ್ಥಾನ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಎಲ್ಲಮ್ಮ ದೇವಾಲಯ ಮುಂಭಾಗದಲ್ಲೇ ಹರಿಯುವ ಹಿರೇಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಎಲ್ಲಮ್ಮವಾಡಿ ದೇವಸ್ಥಾನ ಜಲಾವೃತಗೊಂಡಿದೆ.