ಬೆಳಗಾವಿ: ನಾಗಮೋಹನ ದಾಸ್ ವರದಿಯಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೀಸಲು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವು, ಮೀಸಲಾತಿ ಹೆಚ್ಚಳ ಒಟ್ಟು ಕಾರ್ಯದ ಕಾಲು ಭಾಗ ಮಾತ್ರ ಪೂರ್ಣವಾದಂತಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗೋಕಾಕ್ ನಗರದ ಹಿಲ್ಲ್ ಗಾರ್ಡನ್ ಕಚೇರಿಯಲ್ಲಿ ಮಾತನಾಡಿದ ಅವರು, ಸಂಪುಟ ಸಭೆ ನಂತರ ವಿಧಾನಸಭೆ ಚಳಿಗಾಲ ಅಧಿವೇಶನದಲ್ಲಿ ಒಪ್ಪಿಗೆ, ಲೋಕಸಭೆಯಲ್ಲಿ ಒಪ್ಪಿಗೆ ನಂತರ ಅಂತಿಮವಾಗಿ ರಾಷ್ಟ್ರಪತಿ ಅಂಕಿತ ಸಿಕ್ಕಾಗ ಮಾತ್ರ ಮೀಸಲಾತಿ ಹೆಚ್ಚಳ ಜಾರಿಯಾಗಲಿದೆ. ಈಗಾಗಲೇ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಇನ್ನೂ ನಾಲ್ಕು ಬಾರಿ ಸಿಹಿ ಹಂಚಿದರಷ್ಟೇ ಕಾಯ್ದೆ ಜಾರಿಯಾಗಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ 241 ದಿನ ಧರಣಿ ನಡೆಸಿದರು. ವಾಲ್ಮೀಕಿ ಜಯಂತಿಗೆ ಬಹಿಷ್ಕಾರ ಹಾಕುವ ನಿರ್ಧಾರಕ್ಕೆ ಹೆದರಿ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಸಂಪುಟ ಸಭೆ ಕರೆದು ಮೀಸಲಾತಿ ಹೆಚ್ಚಳ ಮಾಡಿದೆ. ಇಷ್ಟಕ್ಕೆ ನಾವು ಸರ್ಕಾರವನ್ನು ಅಭಿನಂದಿಸುವುದಿಲ್ಲ. ರಾಷ್ಟ್ರಪತಿ ಅಂಕಿತ ಬಿದ್ದ ಮೇಲೆ ಅಭಿನಂದಿಸುತ್ತೇವೆ. ಇದು ಪ್ರಸನ್ನಾನಂದ ಪುರಿ ಸ್ವಾಮೀಜಿ ಗೆಲುವಾಗಲಿದೆ ಎಂದು ಹೇಳಿದರು.
ನೆರೆಯ ತೆಲಂಗಾಣದಲ್ಲಿ ಸಹ ಇದೇ ರೀತಿ ಮೀಸಲಾತಿ ಹೆಚ್ಚಳವನ್ನು 2017ರಲ್ಲಿ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಕೇಂದ್ರ ಬಿಜೆಪಿ ಸರ್ಕಾರ ಇದಕ್ಕೆ ಈವರೆಗೂ ಒಪ್ಪಿಗೆ ನೀಡಿಲ್ಲ. ನಮ್ಮಲ್ಲಿ ಇದು ಚುನಾವಣೆ ತಂತ್ರವಾಗಿದ್ದು, ಪರಿಶಿಷ್ಟ ಜಾತಿ, ಪಂಗಡದವರು ಇದನ್ನು ನಂಬಿ ಮೋಸ ಹೋಗಬಾರದು ಎಂದು ಮನವಿ ಮಾಡಿದರು.
ಒಡೆದ ಮನಸ್ಸು ಜೋಡಿಸಲು ಭಾರತ ಜೋಡೊ ಯಾತ್ರೆ:ದೇಶ ಹಾಗೂ ರಾಜ್ಯದಲ್ಲಿರುವ ಜನರ ಮನಸ್ಸುಗಳು ಒಡೆದಿವೆ. ಸಮಾಜ ಒಡೆದಿವೆ. ಧರ್ಮ ಧರ್ಮಗಳ ಮಧ್ಯೆಯ ಗಲಭೆಗಳು ನಡೆದಿವೆ. ಇಂತಹ ಕೆಟ್ಟ ವ್ಯವಸ್ಥೆಗೆ ಕಡಿವಾಣ ಹಾಕಲು ಹಾಗೂ ಒಡೆದುಹೋದ ಮನಸ್ಸು ಜೋಡಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೊ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಿಂದ 13, 14, 15 ರಂದು ನಾವುಗಳು ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದು, ಕೊನೆಗೆ ರಾಯಚೂರಿನಲ್ಲಿ ರಾಹುಲ್ ಗಾಂಧಿಯವನ್ನ ಬೀಳ್ಕೋಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.