ಬೆಳಗಾವಿ : ಬಳ್ಳಾರಿ ಜಿಲ್ಲೆ ವಿಭಜನೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯನ್ನೂ ವಿಭಜಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ವಿಭಜಿಸಿ ಚಿಕ್ಕೋಡಿ, ಗೋಕಾಕ್ ಜಿಲ್ಲೆ ಮಾಡಬೇಕು. ಬೆಳಗಾವಿ, ಚಿಕ್ಕೋಡಿ, ಗೋಕಾಕ್ ಮೂರು ಜಿಲ್ಲೆಗಳಾಗೋದ್ರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.
ಜಿಲ್ಲೆ ವಿಭಜನೆ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯ ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೃಹತ್ ಜಿಲ್ಲೆ. ಹಿಂದೆ ಧಾರವಾಡ ಜಿಲ್ಲೆಯನ್ನು ಹೇಗೆ ವಿಭಜನೆ ಮಾಡಲಾಯಿತೋ ಹಾಗೇ ಮಾಡಲಿ. ಈ ಹಿಂದೆಯೂ ಈ ಬಗ್ಗೆ ನಾನು ಸಹ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಒಳ್ಳೆಯದು ಎಂದ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಹಾಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ ಎಂದು ತಿಳಿಸಿದ್ದು, ರಾಜ್ಯದಲ್ಲಿ ಇನ್ನೂ ಬೇರೆ ಬೇರೆ ಕೆಲಸ ಮಾಡಬೇಕಿದೆ. ಹೀಗಾಗಿ ಲೋಕಲ್ ರಾಜಕಾರಣದಲ್ಲಿ ಹೆಚ್ಚು ಇಂಟ್ರೆಸ್ಟ್ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಅನಿಲ್ ಲಾಡ್ ಬೆಳಗಾವಿಯಿಂದ ಟಿಕೆಟ್ ಕೇಳಿಲ್ಲ. ನಿಲ್ಲುವುದಾದರೆ ಆಸಕ್ತಿ ತೋರಿಸಬೇಕಲ್ವ? ವೈಯಕ್ತಿಕವಾಗಿ ನಾನು ನಿಲ್ತೇನೆ ಅಂತ ಯಾರೂ ಮುಂದೆ ಬಂದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧವೆಂದು ಎಲ್ಲರೂ ಹೇಳಿದ್ದಾರೆ. ಪ್ರಕಾಶ್ ಹುಕ್ಕೇರಿ ಬೆಳಗಾವಿ ಲೋಕಸಭಾ ಟಿಕೆಟ್ ಕೇಳಿದ್ದ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬೆಳಗಾವಿ ಲೋಕಸಭಾ ಅಭ್ಯರ್ಥಿ ಆಯ್ಕೆ ಸಂಬಂಧ ಮತ್ತೆ ಸಭೆ ಮಾಡಲಾಗುವುದು. ಅಂತಿಮವಾಗಿ ಮೂರು ಅಭ್ಯರ್ಥಿಗಳ ಆಯ್ಕೆ ಮಾಡಿ ಡಿಸೆಂಬರ್ ಮೊದಲ ವಾರದಲ್ಲಿ ಕೆಪಿಸಿಸಿಗೆ ಶಿಫಾರಸು ಮಾಡುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಚುನಾವಣೆ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಯಾವಾಗ ಬೇಕಾದರೂ ಉಪಚುನಾವಣೆ ದಿನಾಂಕ ಘೋಷಣೆ ಆಗಬಹುದು. ಮಸ್ಕಿ ವಿಧಾನಸಭೆ ಉಪಚುನಾವಣೆಗೆ ನಮ್ಮ ಅಭ್ಯರ್ಥಿ ತುರವಿಹಾಳ ಸಮರ್ಥರಿದ್ದಾರೆ ಎಂದರು.
ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಟಿಕೆಟ್ ಅವರಿಗೆ ಕೊಡ್ತೀವಿ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಅಲ್ಲಿ ಲಿಂಗಾಯತರು ಬಹುಸಂಖ್ಯಾತರಿದ್ದಾರೆ, ಎಸ್‌ಸಿ ಎಸ್‌ಟಿ, ಕುರುಬ ಸಮುದಾಯವದರೂ ಇದ್ದಾರೆ. ಹೀಗಾಗಿ ಮಸ್ಕಿ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಸತೀಶ್ ವಿಶ್ವಾಸ ವ್ಯಕ್ತಪಡಿಸಿದರು.