ಬೆಳಗಾವಿ:ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ದೊಡ್ಡ ಶಕ್ತಿ. ಮುಂಬರುವ ದಿನಗಳಲ್ಲಿ ಉನ್ನತ ಹಂತಕ್ಕೇರುವ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅಣ್ಣನವರು ಬೆಳಗಾವಿ ಲೋಕಸಭೆ ಉಪಚುನಾವಣೆ ಅಭ್ಯರ್ಥಿ ಆಗಿರುವುದರಿಂದ ನಮಗೆ ಆನೆ ಬಲ ಬಂದಿದೆ. ಮೊದಲಿನಿಂದಲೂ ನಾವು ಸತೀಶ್ ಜಾರಕಿಹೊಳಿ ಅವರು, ಅಭ್ಯರ್ಥಿಯಾದ್ರೆ ಪಕ್ಷಕ್ಕೆ ಸಾಕಷ್ಟು ಅನುಕೂಲ ಆಗುತ್ತದೆ ಎಂದು ವರಿಷ್ಠರಿಗೆ ಹೇಳಿಕೊಂಡು ಬಂದಿದ್ದೇವೆ. ನಿರೀಕ್ಷೆಯಂತೆ ಸತೀಶ್ ಅವರಿಗೆ ಟಿಕೆಟ್ ನೀಡಿರುವುದರಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಹೀಗಾಗಿ ಇಂದಿನ ಸಭೆ ಪ್ರಾರಂಭವಷ್ಟೇ, ಏ.17ರವರೆಗೆ ಎಲ್ಲ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ದೊಡ್ಡ ಶಕ್ತಿ. ಮುಂಬರುವ ದಿನಗಳಲ್ಲಿ ಸತೀಶ್ ಅಣ್ಣನವರು ತುಂಬಾ ದೊಡ್ಡ ಹಂತಕ್ಕೆ ಹೋಗುವ ಲಕ್ಷಣಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅವರು ಯಾವತ್ತೂ ಜಾತಿ ರಾಜಕಾರಣ ಮಾಡಿದವರಲ್ಲ. ಬುದ್ಧ, ಬಸವ, ಅಂಬೇಡ್ಕರ್ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮದೇ ಆದ ಶೈಲಿಯಲ್ಲಿ ಸಂಘಟನೆ ಮಾಡುತ್ತಿದ್ದಾರೆ. ನನ್ನ ಮಗನಿಗೆ, ನನ್ನ ತಮ್ಮನಿಗೂ ಹೇಳುತ್ತಿರುವುದನ್ನೇ ನಿಮಗೂ ಹೇಳುತ್ತಿದ್ದೇನೆ. ದೊಡ್ಡ ಶಕ್ತಿಯನ್ನೇ ಎಲೆಕ್ಷನ್ಗೆ ನಿಲ್ಲಿಸುತ್ತಿದ್ದೇವೆ. ಆ ಶಕ್ತಿಯನ್ನು ಮೇಲಿನ ಹಂತಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ನಮ್ಮ ಮೇಲಿದೆ. ಆ ಕೆಲಸವನ್ನು ನಾವು ಬಹಳ ಖುಷಿಯಿಂದಲೇ ಮಾಡಬೇಕು ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ಯಾವತ್ತಿಗೂ ಜಾತಿ ರಾಜಕಾರಣ ಮಾಡುವುದಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಕ್ತಿ, ಭಕ್ತಿಗೆ ಅನುಸಾರವಾಗಿ ಕೆಲಸ ಮಾಡಿದ್ರೆ ಸತೀಶ್ ಜಾರಕಿಹೊಳಿ ಗೆಲ್ಲುತ್ತಾರೆ. ಅವರ ಗೆಲುವು ಇಡೀ ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಕ್ತಿ. ನವಚೈತನ್ಯದ ಜೊತೆಗೆ ದಿಕ್ಸೂಚಿ ಆಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ಈ ಟಾನಿಕ್ನನ್ನು ಕಾಪಾಡಿಕೊಳ್ಳಬೇಕಿದೆ ಎಂದರು.