ಬೆಳಗಾವಿ: ಕೇಂದ್ರದಲ್ಲಿರುವುದು ಹಮ್ ದೋ, ಹಮಾರೇ ದೋ ಸರ್ಕಾರವಾಗಿದೆ. ಕೇಂದ್ರ ಸರ್ಕಾರ ಕೇವಲ ಇಬ್ಬರಿಗಾಗಿ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಮಚ್ಚೆಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಎಣ್ಣೆ, ಪೆಟ್ರೋಲ್ ಮಾರಾಟ, ಏರ್ಪೋರ್ಟ್ ನಿರ್ವಹಣೆ ಸೇರಿ ಎಲ್ಲವನ್ನೂ ಅವರೇ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ರೈಲ್ವೆ ಇಲಾಖೆಯನ್ನೂ ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ. ಇನ್ನು ಮುಂದೆ ದೇಶದಲ್ಲಿ ಅದಾನಿಯ ರೈಲುಗಳು ಮಾತ್ರ ಓಡಾಡಲಿವೆ ಎಂದು ಆರೋಪಿಸಿದರು.
ಸರ್ಕಾರಗಳಿರುವುದು ಯಾರದ್ದೊ ಇಬ್ಬರ ಹಿತಕ್ಕಾಗಿ ಅಲ್ಲ, ಸರ್ಕಾರಗಳಿರುವುದು ಜನರ ರಕ್ಷಣೆಗಾಗಿ. ಬಿಜೆಪಿ ಸರ್ಕಾರ ಇದಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಜನವಿರೋಧಿ ಸರ್ಕಾರವನ್ನು ನಿಯಂತ್ರಿಸಲು ಜನರಿಗೆ ಉಪಚುನಾವಣೆ ಉತ್ತಮ ಅವಕಾಶವಾಗಿದೆ. ಸದಾ ಜನಪರವಾಗಿರುವ ಕಾಂಗ್ರೆಸ್ಗೆ ಜನರು ಮತದಾನ ಮಾಡುವ ಮೂಲಕ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದಲ್ಲಿ 5 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅನೇಕ ಜನರಪರ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ, ಇಂದಿನ ರಾಜ್ಯ ಸರ್ಕಾರ ಆ ಯೋಜನೆಗಳನ್ನು ಮೊಟಕುಗೊಳಿಸುತ್ತಿದೆ. ಇದರ ವಿರುದ್ಧ ಜನರು ಜಾಗೃತರಾಗಬೇಕು. ಕಾಂಗ್ರೆಸ್ಗೆ ಮತ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ:2020-21ನೇ ಸಾಲಿನಲ್ಲಿ ಸೀಮಿತ ಅನುದಾನ ಹಿನ್ನೆಲೆ : ಶಿಕ್ಷಣ, ಆರೋಗ್ಯ, ರಸ್ತೆ ಮೇಲಿನ ಬಂಡವಾಳ ವೆಚ್ಚಕ್ಕೇ ಕತ್ತರಿ