ಚಿಕ್ಕೋಡಿ: ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ದೇವರ ಮೂರ್ತಿ ಅಯೋಧ್ಯೆಯಲ್ಲಿ ಇದೇ 22ರಂದು ಪ್ರಾಣ ಪ್ರತಿಷ್ಠಾಪನೆಗೊಳ್ಳಲಿದ್ದು ದೇಶದಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ. ಹಿಂದೆ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಹಾಗೂ ವಿಜಯನಗರದ ಸಾಮ್ರಾಜ್ಯದ ಅವಧಿಯಲ್ಲಿ ಒಂದು ಪ್ರದೇಶಕ್ಕೆ ಮಾತ್ರ ಸಂಭ್ರಮ ಮನೆಮಾಡಿತ್ತು. ಆದರೆ, ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಭಾರತಾದ್ಯಂತ ಸಂಭ್ರಮಾಚರಣೆ ಮಾಡುತ್ತಿರುವುದು ನಾವೆಲ್ಲರೂ ಸ್ವಾಭಿಮಾನ ಹೆಮ್ಮೆಪಡುವ ದಿನ ಎಂದು ಕರಸೇವಕ ಹಾಗೂ ಆರ್ಎಸ್ಎಸ್ (RSS) ಕರ್ನಾಟಕ ಉತ್ತರ ಪ್ರಾಂತ್ ಕಾರ್ಯಕಾರಿಣಿ ಸದಸ್ಯರಾದ ಹಿರಿಯ ಮುಖಂಡರಾದ ಅರವಿಂದ್ ರಾವ ದೇಶಪಾಂಡೆ ಸಂತಸ ವ್ಯಕ್ತಪಡಿಸಿದ್ದಾರೆ.
ಅವರು ಅಥಣಿಯಲ್ಲಿ ಈಟಿವಿ ಭಾರತ ಜೊತೆ ಮಾತನಾಡಿ, ಇಡಿ ಜಗತ್ತು, ಭಾರತ ಮತ್ತು ಹಿಂದೂ ಸಮಾಜದ ದೃಷ್ಟಿಯಿಂದ ರಾಮ ಮಂದಿರ ಉದ್ಘಾಟನೆ ಸಂತೋಷ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಮ ಮಂದಿರ ಪ್ರತಿಷ್ಠಾಪನೆ ಜಗತ್ತು ಸಂಭ್ರಮಿಸುತ್ತಿದೆ. ನಮ್ಮ ಸಮಾಜ ದೃಷ್ಟಿಯಿಂದ, ಭಾರತೀಯರ ದೃಷ್ಟಿಯಿಂದ, ಒಂದು ತಿರುವು ಕೊಡುವಂತಹ ದಿನವಾಗಿರುತ್ತದೆ, ನಾವು ಎಲ್ಲರೂ ಸ್ವಾಭಿಮಾನ ಹೆಮ್ಮೆಪಡುವ ದಿನವೆಂದು ಹೇಳಿದರು.
ರಾಮ ಮಂದಿರ ಹೋರಾಟ ಮೆಲುಕು ಹಾಕಿದ ದೇಶಪಾಂಡೆ: ರಾಮಜನ್ಮಭೂಮಿ ಹೋರಾಟಕ್ಕೆ ಹಿಂದೂ ವಿಶ್ವ ಪರಿಷತ್, ರಾಮನ ಭಕ್ತರು, ಕರಸೇವಕರು, ಆರ್ಎಸ್ಎಸ್ ನಮ್ಮ ಸಂಘಟನೆಗಳು ಹೊಂದಾಣಿಕೆ ಇತ್ತು. ಆದರೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸರ್ಕಾರಗಳು ಇರುದರಿಂದ ನಮಗೆ ಅನುಕೂಲವಾದ ವಾತಾವರಣ ಇರಲಿಲ್ಲ. ರಾಮ ಕಾಲ್ಪನಿಕ ವ್ಯಕ್ತಿ ಎಂದು ಕೋರ್ಟಿಗೆ ವರದಿ ಸಲ್ಲಿಸಿದ ಸರ್ಕಾರ ಅವತ್ತು ಇತ್ತು. ಅಂತ ಹೊತ್ತಿನಲ್ಲಿ ನಾವು ಅಥಣಿಯಿಂದ 7 ಜನ ಬೆಳಗಾವಿಯಿಂದ ಒಟ್ಟು 63 ಜನರ ಒಂದು ತಂಡವಾಗಿ 1989ರಲ್ಲಿ ಕರಸೇವಕರು ಹೋರಾಟದಲ್ಲಿ ಭಾಗವಹಿಸಿದ್ದೆವು.