ರಾಮದುರ್ಗ ತಾಲೂಕಿನಲ್ಲಿ ಚುಂಚನೂರ ಹತ್ತಿರ ಸಂಭವಿಸಿದ ರಸ್ತೆ ಅಪಘಾತ; ಘಟನಾ ಸ್ಥಳದ ದೃಶ್ಯ ಬೆಳಗಾವಿ: ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೊರಟಿದ್ದ ಭಕ್ತರ ವಾಹನ ಮರಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ದುರ್ಘಟನೆ ಸಂಭವಿಸಿದೆ. ಈ ಅಪಘಾತ ನಸುಕಿನ ಜಾವ ನಡೆದಿದೆ.
ರಾಮದುರ್ಗ ತಾಲೂಕಿನ ಚುಂಚನೂರ ಹತ್ತಿರ ವಿಠಲ್ ರುಕ್ಮಿಣಿ ದೇವಸ್ಥಾನ ಆಲದ ಮರಕ್ಕೆ ಗೂಡ್ಸ್ ವಾಹನ ಗುದ್ದಿದೆ. ಈ ಸಂದರ್ಭದಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರನ್ನು ಹಣಮವ್ವ ಮೇಗಾಡಿ (25), ದೀಪಾ (31), ಸವಿತಾ (12), ಸುಪ್ರೀತಾ (11) ಮಾರುತಿ (43), ಇಂದ್ರವ್ವಾ (28) ಎಂದು ಗುರುತಿಸಲಾಗಿದೆ. ಇವರು ರಾಮದುರ್ಗ ತಾಲೂಕಿನ ಹುಲಕುಂದ ಗ್ರಾಮಸ್ಥರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಗೋಕಾಕ್ ಹಾಗೂ ಇನ್ನಿತರೆ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಕಟಕೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ:ನೆಲಮಂಗಲದಲ್ಲಿ ಲಾರಿ ಮತ್ತು ಆಂಬ್ಯುಲೆನ್ಸ್ ನಡುವೆ ಅಪಘಾತ.. ಎರಡೂ ವಾಹನಗಳು ಪಲ್ಟಿ
ಗ್ರಾಮದಿಂದ ಹೊರಟ ವಾಹನವು ರಾಮದುರ್ಗ ಮಾರ್ಗವಾಗಿ, ಚುಂಚನೂರು ಗ್ರಾಮದ ಸರಹದ್ದಿಗೆ ಬಂದಿತ್ತು. ವೇಗವಾಗಿ ಚಲಿಸುತ್ತಿದ್ದ ವಾಹನ ಚುಂಚನೂರು ವಿಠಲಪ್ಪನ ದೇವಸ್ಥಾನದ ಮುದಿನ ಬೃಹತ್ ಆಲದ ಮರಕ್ಕೆ ಡಿಕ್ಕಿ ಹೊಡೆದು ಉರುಳಿಬಿದ್ದಿದೆ. ಅಪಘಾತದ ರಭಸಕ್ಕೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದೇ ಮಾರ್ಗದಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ಇತರ ವಾಹನಗಳ ಸವಾರರು, ಗ್ರಾಮಸ್ಥರು ಸಹಾಯಕ್ಕೆ ಧಾವಿಸಿ, ರಕ್ಷಣಾ ಕಾರ್ಯ ಮಾಡಿದರು. ಸ್ಥಳಕ್ಕೆ ಬಂದ ಕಟಕೋಳ ಪೊಲೀಸರೂ ಆಂಬ್ಯುಲೆನ್ಸ್ ಮೂಲಕ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ಬೆಳಗಾವಿ ಎಸ್ಪಿ ಡಾ.ಸಂಜೀವ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಅಪಘಾತಕ್ಕೀಡಾದ ಕಾರಿನಲ್ಲಿದ್ದವರಿಗೆ ಉಪಚರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ: ಅಪಘಾತದಲ್ಲಿ ಮೃತಪಟ್ಟಿರುವ ಆರು ಜನರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು. ಗಾಯಗೊಂಡಿರುವ 16 ಜನರಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕುಟುಂಬಸ್ಥರಿಗೆ ಸಾಂತ್ವನ: ಘಟನೆಯಿಂದ ಮೃತಪಟ್ಟಿರುವವರ ಆತ್ಮಕ್ಕೆ ಭಗವಂತ ಚಿರಶಾಂತಿ ದಯಪಾಲಿಸಲಿ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ. ಮೃತರ ಕುಟುಂಬದ ದುಃಖದಲ್ಲಿ ತಾವೂ ಭಾಗಿಯಾಗಿದ್ದೇವೆ ಎಂದು ಕುಟುಂಬದ ಸದಸ್ಯರಿಗೆ ಸಚಿವರು ಸಾಂತ್ವನ ಹೇಳಿದ್ದಾರೆ.