ಚಿಕ್ಕೋಡಿ (ಬೆಳಗಾವಿ):ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗಿದ್ದು, ಕಳೆದೊಂದು ವಾರದಿಂದ ನಿಯಂತ್ರಣಕ್ಕೆ ಬಂದಿದೆ. ಆದರೆ, ಅಲ್ಲಿನ ಪ್ರಮುಖ ದೇವಾಲಯಗಳಿಗೆ ಇಂದಿಗೂ ಸಹ ಭಕ್ತರ ಪ್ರವೇಶ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆ ಗಡಿ ಪ್ರದೇಶದ ಭಕ್ತರು ಮಹಾರಾಷ್ಟ್ರದ ಗಡಿಯಲ್ಲಿನ ದೇವಾಲಯಕ್ಕೆಂದು ತೆರಳಿ ದರ್ಶನವಾಗದೇ ಹಾಗೆಯೇ ಮರಳುತ್ತಿದ್ದಾರೆ.
ಕೊರೊನಾ ಭೀತಿಯಿಂದ ಮಹಾರಾಷ್ಟ್ರದ 8 ಸುಪ್ರಸಿದ್ಧ ದೇವಸ್ದಾನಗಳು ಇಂದಿನವರೆಗೂ ಮುಚ್ಚಿದ್ದು, ದಸರಾ ವೇಳೆಗೆ ಕರ್ನಾಟಕ ಭಕ್ತರು ದೇವಸ್ಥಾನಗಳಿಗೆ ಹೋಗಿ 9 ದಿನಗಳ ಕಾಲ ದೀಪಕ್ಕೆ ಎಣ್ಣೆ ಹಾಕುವುದು ವಾಡಿಕೆಯಾಗಿತ್ತು. ಅದರಂತೆ ಭಕ್ತರು ಪಕ್ಕದ ಮಹಾರಾಷ್ಟ್ರಕ್ಕೆ ಹೋಗಿ ದೇವರ ದರ್ಶನಕ್ಕೆ ಅವಕಾಶ ಸಿಗದೆ ನಿರಾಶೆಯಿಂದ ಮರಳುತ್ತಿದ್ದಾರೆ.
ಅಲ್ಲಿನ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ತುಳಜಾಪೂರದ ಶ್ರೀ ಅಂಬಾಬಾಯಿ, ಶ್ರೀ ನರಸಿಂಹ ದೇವಸ್ಥಾನ, ಅಳತೆಯ ಶ್ರೀರಾಮಲಿಂಗ ದೇವಸ್ಥಾನ, ಅಮದಾಪೂರದ ಶ್ರೀ ಬಾಳುಮಾಮಾ ದೇವಸ್ಥಾನ, ಪಾಠಣದ ಶ್ರೀನಾಯಕಬಾ ದೇವಸ್ಥಾನ, ಪಟ್ಟಣ ಕಡೋಲಿಯ ಶ್ರೀವಿಠ್ಠಲ ಬೀರದೇವ ದೇವಸ್ಥಾನಗಳು ದಸರಾ ಸಂದರ್ಭದಲ್ಲೂ ಮುಚ್ಚಿರಲಿವೆ.