ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ಬೆಳಗಾವಿ: "ನಾನು ಈ ಬಾರಿ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ನನ್ನ ಮೇಲೆ ಓರ್ವ ಮಹಾನಾಯಕ ಷಡ್ಯಂತ್ರ ಮಾಡಿದ್ದಾನೆ. ಆ ಮಹಾನಾಯಕನಿಗೆ ಸವಾಲೆಸೆಯಲು ನಾನು ಚುನಾವಣೆಗೆ ನಿಲ್ಲುತ್ತಿದ್ದೇನೆ" ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾನುವಾರ ಗೋಕಾಕ್ ತಾಲೂಕಿನ ಕೊಣ್ಣೂರಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಘೋಷಿಸಿದರು. "ಆತನನ್ನು ಪೂರ್ಣ ಪ್ರಮಾಣದಲ್ಲಿ ಮೂಲೆಗುಂಪು ಮಾಡುವವರೆಗೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ. ಏನೇ ತ್ಯಾಗ ಮಾಡಿಯಾದರೂ 2023ಕ್ಕೆ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡುತ್ತೇನೆ" ಎಂದರು.
"ನಾನು ಈಗ ಏಳನೇ ಬಾರಿ ಶಾಸಕನಾಗಿದ್ದೇನೆ. ಎಂಟನೇ ಬಾರಿಗೆ ಶಾಸಕನಾಗುವ ನಿರ್ಧಾರವನ್ನು ನಿಮ್ಮ ಮೇಲೆ ಬಿಟ್ಟಿದ್ದೇನೆ. ಮುಂದಿನ ಬಾರಿ ಶಾಸಕನಾದ ಮೇಲೆ ರಾಜಕೀಯದಿಂದ ನಿವೃತ್ತಿ ಆಗಬೇಕೆಂದಿದ್ದೇನೆ" ಎಂದರು.
"ಡಿಕೆಶಿ ನನ್ನ ಜೀವನ ಹಾಳು ಮಾಡಿದ್ದಾನೆ": ಇತ್ತೀಚೆಗೆ ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದಿದ್ದರು. "ಡಿಕೆಶಿ ನನ್ನ ವೈಯಕ್ತಿಕ ಬದುಕು ಹಾಳು ಮಾಡಿದ್ದಾನೆ. ಇದೂ ಹೀಗೆಯೇ ಮುಂದುವರೆದರೆ ನಾನು ಅವನ ಬಗ್ಗೆಯೂ ಮಾತನಾಡಬೇಕಾಗುತ್ತದೆ. ಇಂಥ ಆರೋಪಗಳನ್ನೆಲ್ಲ ಎದುರಿಸಿ ಬಂದಿದ್ದೇನೆ . ಡಿಕೆಶಿಗೆ ನನ್ನನ್ನು ಕಂಡರೆ ಭಯ. ಅದಕ್ಕಾಗಿ ನನ್ನ ಬಗ್ಗೆ ಹೀಗೆಲ್ಲಾ ಮಾತನಾಡುತ್ತಾನೆ. ನಾನು ಯಾವುದಕ್ಕೂ ಹೆದರುವ ಮಗ ಅಲ್ಲ ಎಂಬುದು ಅವನಿಗೆ ತಿಳಿದಿದೆ" ಎಂದಿದ್ದರು.
ಇದೇ ಸಂದರ್ಭದಲ್ಲಿ ಪ್ರತಿ ಮತಕ್ಕೆ 6 ಸಾವಿರ ರೂಪಾಯಿ ಹೇಳಿಕೆ ಕುರಿತು ಸ್ಪಷ್ಟನೆ ನೀಡುತ್ತಾ, "ನಾನು ಮಾತಿನ ಭರದಲ್ಲಿ ಹೇಳಿದ್ದೆ. ಅಷ್ಟಕ್ಕೂ ನಾನು ಗ್ರಾಮೀಣ ಭಾಗದಲ್ಲಿ ಉಡುಗೊರೆ ವಿಚಾರವಾಗಿ ಮಾತನಾಡಿದ್ದೆ. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಹೀಗಾಗಿ, ಹಾಗೆ ಹೇಳಿದ್ದೆ. ನಾನು ಆರು ಬಾರಿ ಶಾಸಕನಾಗಿರುವವನು, ನನಗೂ ಕಾನೂನಿನ ಅರಿವಿದೆ. ನಮ್ಮ ಪಕ್ಷಕ್ಕೆ 6 ಸಾವಿರ ರೂ ಕೊಟ್ಟು ಮತ ಕೊಂಡುಕೊಳ್ಳುವ ಅಗತ್ಯವಿಲ್ಲ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯಂತಹ ನಾಯಕರಿರುವಾಗ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಹಾಗಾಗಿ ನಾವು ಹಣ ನೀಡಿ ಚುನಾವಣೆಯಲ್ಲಿ ಗೆಲ್ಲುವ ಅಗತ್ಯವಿಲ್ಲ" ಎಂದು ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ:ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಬಿಜೆಪಿ ಮಾಜಿ ಶಾಸಕ ಬಸವರಾಜ್ ಮಂಡಿಮಠ