ಬೆಳಗಾವಿ:ಮಂತ್ರಿ ಆಗುತ್ತೇನೋ, ಬಿಡುತ್ತೇನೂ ಬೇರೆ ವಿಚಾರ, ಸದ್ಯ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಪಕ್ಷ ಸಂಘಟನೆ ಮುಖ್ಯ. ಜಿಲ್ಲೆಯ 18 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ವಿಶೇಷವಾಗಿ ಬೆಳಗಾವಿ ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.
ಜನಸಾಮಾನ್ಯರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು, ಹಣದಿಂದ ಚುನಾವಣೆ ಗೆಲ್ಲುತ್ತೇನೆ ಎಂದರೆ ಆಗುವುದಿಲ್ಲ, ಎಲ್ಲವೂ ದುಡ್ಡಿನ ಮೇಲೆ ನಡೆಯಲ್ಲ, ಕೆಲವು ಕಡೆ ಜಾತಿ ಬೇರೆ ಮಾಡುವುದು, ಮರಾಠಿ ಜನರ ಹತ್ತಿರ ಬಂದು ಮೈ ಇನ್ಸಾನ್ ಹೋ ಎನ್ನುವುದು ಇದನ್ನೆಲ್ಲ ಜನರು ನೋಡುತ್ತಿದ್ದಾರೆ. ಜನರು ತಕ್ಕ ಉತ್ತರ ಕೊಡುತ್ತಾರೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಟಾಂಗ್ ನೀಡಿದರು.
ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸಂಜಯ ಪಾಟೀಲ ಸೋತಿದ್ದರು. ಈ ಬಾರಿ ಚುನಾವಣೆಯಲ್ಲಿ ನನ್ನ ಶಕ್ತಿ ತೋರಿಸುತ್ತೇನೆ. ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದು ರಮೇಶ್ ಜಾರಕಿಹೊಳಿ ಭವಿಷ್ಯ ನುಡಿದರು. ಯುದ್ಧ ನೀತಿ ಹೇಳುವುದಿಲ್ಲ, ಚುನಾವಣೆ ಸಮಯದಲ್ಲಿ ಎಲ್ಲವನ್ನೂ ತಿಳಿಸುತ್ತೇನೆ ಎಂದರು.
ಇದನ್ನೂ ಓದಿ:ಒಡೆದಾಳುವ ನೀತಿ ಪ್ರಯೋಗಿಸಿದ್ದಕ್ಕಲ್ಲವೇ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಿರುವುದು: ಬಿಜೆಪಿ