ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಲೇವಡಿ ಬೆಳಗಾವಿ :ಚುನಾವಣೆ ಕಾರಣದಿಂದ ನೀವು ಏನೇನು ಘೋಷಣೆ ಮಾಡಿದ್ದೀರೋ ಅವುಗಳನ್ನು ಜಾರಿಗೆ ತರುವುದು ನಿಮ್ಮ ಜವಾಬ್ದಾರಿ. ನೀವು ಕೂಡ ಅಕ್ಕಿ ಖರೀದಿ ಮಾಡಲು ಮುಕ್ತ ಮಾರುಕಟ್ಟೆಯಲ್ಲಿ ಅವಕಾಶವಿದೆ. ಇದನ್ನು ಉಪಯೋಗ ಮಾಡಿಕೊಳ್ಳಬೇಕೆ ಹೊರತು, ಕೇಂದ್ರದ ಮೇಲೆ ಆರೋಪ ಮಾಡಬಾರದು. ದೇಶದ ಎಲ್ಲಾ ರಾಜ್ಯಗಳನ್ನು ಕೇಂದ್ರ ಸರ್ಕಾರ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಪೂರ್ವ ತಯಾರಿ ಇಲ್ಲದೇ, ರಾಜ್ಯದ ಜನರಿಗೆ ಸುಳ್ಳು ಭರವಸೆ ಕೊಟ್ಟು, ಐದು ಗ್ಯಾರಂಟಿ ಬಗ್ಗೆ ಹೇಳಿದ್ದರಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅದರಲ್ಲಿ ಪ್ರಮುಖವಾಗಿ ರಾಜ್ಯದ ಜನರಿಗೆ ತಲಾ 10 ಕೆಜಿ ಅಕ್ಕಿ ಘೋಷಣೆಯಾಗಿದೆ. ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಅನ್ವಯ ಬಡತನ ರೇಖೆಗಿಂತ ಕೆಳಗಿರುವವರಿಗೆ ತಲಾ 5 ಕೆಜಿ ಅಕ್ಕಿಯನ್ನು ಅನೇಕ ವರ್ಷಗಳಿಂದ ಉಚಿತವಾಗಿ ಕೊಡುತ್ತಿದೆ. ಅಂತ್ಯೋದಯ ಅನ್ನ ಯೋಜನೆ ಮೂಲಕವೂ ಒಂದು ಕುಟುಂಬದಲ್ಲಿ ಮೂರೇ ಜನ ಇದ್ದರೂ ಕೂಡ 35 ಕೆಜಿ ಅಕ್ಕಿಯನ್ನು ಈಗಾಗಲೇ ನಾವು ವಿತರಣೆ ಮಾಡುತ್ತಿದ್ದೇವೆ. ಇದರಲ್ಲಿ ಕುಟುಂಬ ಸದಸ್ಯರು ಹೆಚ್ಚಿದ್ದರೆ, ಹೆಚ್ಚು ಅಕ್ಕಿ ಕೊಡುತ್ತಿದ್ದೇವೆ. ಕಡಿಮೆ ದರದಲ್ಲಿ ಎಪಿಎಲ್ ಕಾರ್ಡ್ದಾರರಿಗೂ ಅಕ್ಕಿ ವಿತರಣೆ ಮಾಡುತ್ತಿದ್ದೇವೆ ಎಂದರು.
ಕೊರೊನಾ ಬಂದ ಸಂದರ್ಭದಿಂದ ಹಿಡಿದು ಇಲ್ಲಿಯವರೆಗೆ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿರುವುದು ಜಗತ್ತಿನಲ್ಲೇ ಮೊದಲು. ಆದರೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದ್ದು, ಜನರ ಕಣ್ಣಿಗೆ ಮಂಕು ಬೂದಿ ಎರಚಲು ಹೊರಟಿದೆ. 'ನಾವು ಉಚಿತವಾಗಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡುತ್ತಿಲ್ಲ. ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದವರು ನಮಗೆ ಕೊಡುತ್ತೇವೆ ಎಂದು ಹೇಳಿದ್ದರು. ಅದಾದ ಬಳಿಕ ಕೇಂದ್ರ ಪತ್ರ ಬರೆದಿದೆ' ಎಂಬ ಸುಳ್ಳು ಸಂಗತಿಯನ್ನು ಜನರ ಮಧ್ಯ ಹರಿಬಿಟ್ಟಿದ್ದಾರೆ ಎಂದು ಕಡಾಡಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಒಂದು ನಿರ್ಣಯ ಕೈಗೊಂಡಿದೆ :ನೀವು ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದವರಿಗೆ 10ನೇ ತಾರೀಖು ಪತ್ರ ಬರೆದಿದ್ದೀರಿ. ಅದಕ್ಕೂ ಮುಂಚೆ 8ನೇ ತಾರೀಖು ಕೇಂದ್ರದ ಆಹಾರ ಇಲಾಖೆ ಒಂದು ಸಭೆ ಮಾಡಿತ್ತು. ದೇಶದಲ್ಲಿ ಮುಂಗಾರು ಮಳೆ ವಿಫಲವಾಗಿ, ಮುಂದಕ್ಕೆ ಹೋಗುತ್ತಿದೆ. ಆ ಕಾರಣದಿಂದ ಆಹಾರ ಸಮಸ್ಯೆ ಉಂಟಾದರೆ ಮುಂಜಾಗ್ರತವಾಗಿ ಏನು ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿ, ಒಂದು ನಿರ್ಣಯ ಕೈಗೊಂಡಿತ್ತು ಎಂದರು.
ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾಗುತ್ತದೆ: ಅದಾದ ಬಳಿಕ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದವರಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ. ನಾವು ಮುಕ್ತ ಮಾರುಕಟ್ಟೆಯಲ್ಲಿ ದರ ಹೆಚ್ಚಾಗದಂತೆ ತಡೆಯಬೇಕಾಗುತ್ತದೆ. ದರ ತಡೆಯಲು ಗೋದಾಮಿನಲ್ಲಿ ಅಕ್ಕಿ ಇಟ್ಟುಕೊಂಡು ಕೂರಲು ಆಗುವುದಿಲ್ಲ. ಅದನ್ನು ಮುಕ್ತ ಮಾರುಕಟ್ಟೆಗೆ ಬಿಡಬೇಕಾಗುತ್ತದೆ. ರಾಜ್ಯಗಳಿಗೂ ಕೊಡಬೇಕಾಗುತ್ತದೆ. ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ನೋಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಕೇಂದ್ರ ಆಹಾರ ಇಲಾಖೆ ಅಧಿಕಾರಿಗಳು ನಿರ್ಣಯ ತೆಗೆದುಕೊಂಡಿದ್ದಾರೆ ಹೊರತು, ಸಚಿವರಲ್ಲ ಎಂದು ಈರಣ್ಣ ಕಡಾಡಿ ಕಿಡಿಕಾರಿದರು.
ಮಂಕು ಬೂದಿ ಎರಚುವ ಕೆಲಸ ನಿಲ್ಲಿಸಬೇಕು : ಇದಾದ ಬಳಿಕ ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದವರು ನಮ್ಮಲ್ಲಿ ಇಷ್ಟು ಸ್ಟಾಕ್ ಇತ್ತು. ಕೇಂದ್ರದ ಈ ರೀತಿ ನಿರ್ಣಯ ತೆಗೆದುಕೊಂಡಿದ್ದರಿಂದ ಅಕ್ಕಿಯನ್ನು ಕೊಡಲು ಆಗುವುದಿಲ್ಲ ಎಂದು ಹೇಳಿದೆ. ಇದನ್ನು ಇಟ್ಟುಕೊಂಡು ಕಾಂಗ್ರೆಸ್ ರಾಜಕಾರಣ ಮಾಡಲು ಹೊರಟಿದೆ. ನೀವು ಯಾವುದೇ ಯೋಜನೆ ಘೋಷಣೆ ಮಾಡುವಾಗ, ಇದರ ಬಗ್ಗೆ ಮೊದಲು ಯೋಚನೆ ಮಾಡಿದ್ದೀರಾ? ಕೇಂದ್ರ ಸರ್ಕಾರ ಅವತ್ತು ಏನಾದರು ಕೊಡುತ್ತೆ ಅಂತಾ ಹೇಳಿತ್ತೇನು? ಈ ರೀತಿ ಜನರನ್ನು ದಿಶಾಬುಲ್ ಮಾಡಿ, ಅವರಿಗೆ ಮಂಕು ಬೂದಿ ಎರಚುವ ಕೆಲಸವನ್ನು ನಿಲ್ಲಿಸಬೇಕು.
ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿರುವುದು ಅಕ್ಷಮ್ಯ ಅಪರಾಧ: ನಾಳೆ ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಚುನಾವಣೆ ಬರುತ್ತದೆ. ಆ ಸಂದರ್ಭದಲ್ಲಿ ಅವರೆಲ್ಲರೂ ಈ ರೀತಿ ಘೋಷಣೆ ಮಾಡಿದರೆ ಅದಕ್ಕೆ ಕೇಂದ್ರ ಸರ್ಕಾರ ಕಠಿಬದ್ಧ ಇರಬೇಕು ಎಂದರೆ ಯಾವ ನ್ಯಾಯ? ಆಡಳಿತ ಪಕ್ಷದಲ್ಲಿರುವ ಕಾಂಗ್ರೆಸ್ ಪ್ರತಿಭಟನೆಗೆ ಇಳಿದಿದ್ದು, ಅತ್ಯಂತ ಅಕ್ಷಮ್ಯ ಅಪರಾಧ ಎಂದು ಕಡಾಡಿ ವಾಗ್ದಾಳಿ ಮಾಡಿದರು.
ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ: ಅಕ್ಕಿ ಯಾವ ರೀತಿ ಖರೀದಿಸಬೇಕು. ನೀವು ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಯಾವ ರೀತಿ ಜಾರಿಗೆ ತರುತ್ತೀರಿ ಎಂಬ ಬಗ್ಗೆ ಗಮನಹರಿಸಬೇಕು. ಜನರನ್ನು ದಿಶಾಬುಲ್ ಮಾಡುವ ಕೆಲಸ ಮಾಡಬಾರದು. ಇನ್ನು 200 ಯೂನಿಟ್ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದ್ದಿರಿ. ಆದರೆ ಈಗ ಬಳಕೆ ಮಾಡಿದ ಸರಾಸರಿ ಮೇಲೆ ಶೇ. 10ರಷ್ಟು ಕೊಡುತ್ತೇವೆ ಎಂದು ಹೇಳುತ್ತಿದ್ದಿರಿ. ಚುನಾವಣೆ ಸಂದರ್ಭದಲ್ಲಿ ಇದನ್ನು ನೀವು ಹೇಳಿರಲಿಲ್ಲ. ಇನ್ನು ಕೆಇಆರ್ಸಿ ದರ ಹೆಚ್ಚು ಮಾಡದೆ, ಆಗ ಬಿಜೆಪಿ ಸರ್ಕಾರವಿತ್ತು ಎಂದಿದ್ದಿರಿ. ಕೆಇಆರ್ಸಿ ಸಭೆ ಆಗಿದ್ದು 12ನೇ ತಾರೀಖು. ಚುನಾವಣೆ ಆಗಿದ್ದು 10ನೇ ತಾರೀಖು, ಹೀಗಾಗಿ ಅವತ್ತು ಯಾವುದೇ ಸರ್ಕಾರ ಇಲ್ಲದಿದ್ದರೂ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದೀರಿ.
ರೈತರು ದಂಗೆ ಎದ್ದಾರು ಹುಷಾರ್: ಈಗ ನೀವು ಅಧಿಕಾರಕ್ಕೆ ಬಂದಿದ್ದೀರಿ. ಕೆಇಆರ್ಸಿ ಜಾರಿಗೆ ತಂದಿರುವ ನಿಯಮ ತಡೆ ಹಿಡಿಯಿರಿ. ಹೆಂಡತಿಗೆ ಫ್ರೀ ಕೊಟ್ಟು ಗಂಡನ ಕಿಸೆಯಿಂದ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೀರಿ. ಇದು ಅತ್ಯಂತ ಅಕ್ಷಮ್ಯ, ಇನ್ನು ರೈತರ ಆಧಾರ್ ಕಾರ್ಡ್ ಗಳನ್ನು ಆರ್ ಆರ್ ನಂಬರ್ಗಳಿಗೆ ಲಿಂಕ್ ಮಾಡಬೇಕು ಎನ್ನುತ್ತಿದ್ದೀರಿ. ಇದರ ಉದ್ದೇಶ ಒಬ್ಬ ರೈತ ಒಂದು ಐಪಿ ಸೆಟ್ ಹೊಂದಿರಬೇಕು. ಒಂದಕ್ಕೆ ಮಾತ್ರ ಉಚಿತ ಕೊಡಬೇಕು ಎನ್ನುವುದಾಗಿದೆ. ಯಾವುದೇ ರೈತ ಒಂದೇ ಪಂಪ್ಸೆಟ್ ಮೂಲಕ ನೀರು ಹಾಯಿಸಲು ಸಾಧ್ಯವಿಲ್ಲ. ಹೀಗಾಗಿ ರೈತರು ಹಲವಾರು ಐಪಿ ಸೆಟ್ಗಳನ್ನು ಹೊಂದಿರುತ್ತಾರೆ. ಇವ್ಯಾವು ಕೈಗಾರಿಕೆಗಳು ಅಲ್ಲ. ಈ ದೇಶಕ್ಕೆ ಅನ್ನ ಕೊಡುವ ರೈತರ ಐಪಿ ಸೆಟ್ಗಳ ಮೇಲೆ ನೀವು ಏನಾದರೂ ರಾಜಕಾರಣ ಮಾಡಲು ಹೊರಟರೆ ರೈತರು ದಂಗೆ ಎದ್ದಾರು ಹುಷಾರ್ ಎಂದು ಈರಣ್ಣ ಕಡಾಡಿ ಸರ್ಕಾರಕ್ಕೆ ಎಚ್ಚರಿಸಿದರು.
ಮೋದಿ ಹೆಸರು ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ: ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ನಮ್ಮ ದೇಶದಲ್ಲಿ ಜನರು ಬೇರೆ ಬೇರೆ ವಿಷಯದಲ್ಲಿ ಪಿಹೆಚ್ಡಿ ಮಾಡುತ್ತಾರೆ. ಆದರೆ ಕಾಂಗ್ರೆಸ್ ಸುಳ್ಳು ಹೇಳುವುದರಲ್ಲಿ ಪಿಹೆಚ್ಡಿ ಮಾಡಿದೆ. ನಾಟಕ ಕಂಪನಿ ಅಂದರೆ ಕಾಂಗ್ರೆಸ್. ಇವರಿಗೆ ಪಿಹೆಚ್ಡಿ ಅಲ್ಲ. ನಾಟಕ ಮಾಡುವುದರಲ್ಲಿ ದೊಡ್ಡ ಪ್ರಶಸ್ತಿ ಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಗತ್ತಿನಲ್ಲಿರುವ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಕಾಂಗ್ರೆಸ್ ತನ್ನ ವೈಫಲ್ಯ ಮರೆಮಾಚಿಕೊಳ್ಳಲು ಪ್ರಧಾನಿ ಮೋದಿ ಅವರ ಹೆಸರು ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ ಎಂದರು. ಮಾಧ್ಯಮಗೋಷ್ಟಿಯಲ್ಲಿ ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ದಾದಾಗೌಡ ಬಿರಾದಾರ ಸೇರಿ ಮತ್ತಿತರರು ಇದ್ದರು.
ಇದನ್ನೂ ಓದಿ:ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಕೈಗೊಂಡಿರುವುದು ನಾಚಿಕೆಗೇಡಿನ ಸಂಗತಿ : ಕೆ ಎಸ್ ಈಶ್ವರಪ್ಪ