ಬೆಳಗಾವಿ:ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಫೋಟೊ ಸಹಿತ ಅಪ್ಲೋಡ್ ಮಾಡುವ ಒಂದು ವಿನೂತನ ಬೆಳೆ ಸಮೀಕ್ಷೆ ಯೋಜನೆಯನ್ನು ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಒಂದು ಮಾದರಿ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ಬೆಳೆ ಸಮೀಕ್ಷೆ ಆ್ಯಪ್ ದೇಶಕ್ಕೆ ಮಾದರಿ: ರಾಜ್ಯ ಸರ್ಕಾರ ಕಾರ್ಯಕ್ಕೆ ಈರಣ್ಣ ಕಡಾಡಿ ಮೆಚ್ಚುಗೆ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ತಮ್ಮ ಸ್ವಂತ ಜಮೀನನಲ್ಲಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಮೂಲಕ ಮಾಹಿತಿಯನ್ನು ಅಪ್ಲೋಡ್ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿದರು. ಈ ಯೋಜನೆಯು ಪ್ರಕೃತಿ ವಿಕೋಪದಡಿ ಅನಾವೃಷ್ಠಿ, ಅತೀವೃಷ್ಠಿ, ಪ್ರವಾಹ ಸಂದರ್ಭಗಳಲ್ಲಿ ರೈತರ ಬೆಳೆ ಹಾನಿ ಕುರಿತು ಎನ್ಡಿಆರ್ಎಫ್ ಮತ್ತ ಎಸ್ಡಿಆರ್ಎಫ್ ಅಡಿಯಲ್ಲಿ ಪರಿಹಾರ ನೀಡಲು ಅನುಕೂಲವಾಗಲಿದೆ.
ಜೊತೆಗೆ ಕನಿಷ್ಠ ಬೆಂಬಲ ಬೆಲೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಹಾಗೂ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಈ ಸಮೀಕ್ಷೆ ಅನುಕೂಲವಾಗಿದೆ. ಪ್ರತಿವರ್ಷ ಈ ಎಲ್ಲ ಬೆಳೆ ವಿವರಗಳ ಮಾಹಿತಿಗಳು ಆರ್ಟಿಸಿಯಲ್ಲಿ ದಾಖಲಾಗುತ್ತವೆ. ಇದರಿಂದಾಗಿ ಇಡೀ ರಾಜ್ಯದ ಸಂಪೂರ್ಣ ಬೆಳೆಗಳ ವಿವರ ಸರ್ಕಾರಕ್ಕೆ ಲಭ್ಯವಾಗತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲು ಹಾಗೂ ಸರ್ಕಾರ ಯೋಜನೆ ತಯಾರಿಸಲು ಇದು ಅನುಕೂಲವಾಗಲಿದೆ.
ಹೀಗಾಗಿ ರೈತರು 2020-21ನೇ ಸಾಲಿನ ಬೆಳೆ ಸಮೀಕ್ಷೆ ಯೋಜನೆಯಲ್ಲಿ ತಾವು ಖುದ್ದಾಗಿ ಭಾಗವಹಿಸುವ ಮೂಲಕ ಅಥವಾ ಅನುಭವಸ್ಥರ ಸಹಾಯಪಡೆದು ತಮ್ಮ ಜಮೀನುಗಳಲ್ಲಿರುವ ಬೆಳೆಯ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‌ನಲ್ಲಿ ನಿಗದಿತ ಸಮಯದೊಳಗೆ ಅಪ್ಲೋಡ್ ಮಾಡಿ ಎಂದು ಮನವಿ ಮಾಡಿದರು.
ಈಗಾಗಲೇ ಬೆಳಗಾವಿ ಜಿಲ್ಲೆಯು 14,82,566 ಪ್ಲಾಟ್‌ಗಳ ಪೈಕಿ 43,18,01 ಪ್ಲಾಟ್‌ಗಳ ಬೆಳೆ ಸಮೀಕ್ಷೆ ಮಾಡಿ, ರಾಜ್ಯದಲ್ಲಿಯೇ ನಂಬರ್ 1 ಜಿಲ್ಲೆಯಾಗಿದೆ. ಇದಕ್ಕೆ ಕೃಷಿ ಇಲಾಖೆ ಅಧಿಕಾರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.