ಚಿಕ್ಕೋಡಿ:15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಕಾಗವಾಡ ಕ್ಷೇತ್ರದಲ್ಲಿ ರಾಜಕೀಯ ಚಟುವಟೆಕೆಗಳು ಗರಿಗೆದರಿವೆ. ತೀವ್ರ ಕುತೂಹಲ ಕೆರಳಿಸಿರುವ ಈ ಕ್ಷೇತ್ರದಿಂದ ಮಾಜಿ ಶಾಸಕ ರಾಜು ಕಾಗೆ ಅಖಾಡಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರ ರಾಜ್ಯದಲ್ಲಿಯೇ ಗಮನ ಸೆಳೆದಿದೆ. ಏಕೆಂದರೆ ಉಪಚುನಾವಣೆ ಘೋಷಣೆಯಾದರೂ ಯಾರು, ಯಾವ ಪಕ್ಷದ ಅಭ್ಯರ್ಥಿಗಳಾಗುತ್ತಾರೆ ಎಂಬ ಗೊಂದಲ, ಚರ್ಚೆ ನಡೆಯತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಿಂದ ಉಚ್ಛಾಟನೆಗೊಂಡು ಅನರ್ಹಗೊಂಡಿರುವ ಶ್ರೀಮಂತ ಪಾಟೀಲ್ ಅವರು ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗುವ ಅವಕಾಶ ಇಲ್ಲದಂತಾಗಿದೆ.
ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಆಯೋಗ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್ ಅವರ ಪುತ್ರ ಶ್ರೀನಿವಾಸ ಪಾಟೀಲ್ಗೆ ಬಿಜೆಪಿ ಮಣೆ ಹಾಕಿದರೆ ಟಿಕೆಟ್ಗ್ಯಾರಂಟಿ. ಇತ್ತ ರಾಜು ಕಾಗೆ ಅವರನ್ನೂ ಪಕ್ಷ ಕೈ ಬಿಡಲಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಶ್ರೀಮಂತ ಪಾಟೀಲರ ಸ್ಥಿತಿ ಅತಂತ್ರವಾಗಿದ್ದು, ಸುಪ್ರೀಂಕೋರ್ಟ್ನಲ್ಲಿ ಕೇಸ್ ಬಾಕಿ ಇರುವುದರಿಂದ ಕ್ಷೇತ್ರದ ಜನರಿಗೆ ಮುಖ ತೋರಿಸದ ಸ್ಥಿತಿ ನಿರ್ಮಾಣವಾಗಿದೆ. ಅನರ್ಹಗೊಂಡ ಬಳಿಕ ಕಾರ್ಯಕರ್ತರ ಮುಂದೆ ಹಲವು ಬಾರಿ ಮುಖಭಂಗ ಅನುಭವಿಸಿದ್ದ ಶ್ರೀಮಂತ ಪಾಟೀಲ್ ಅವರ ಪಾಲಿಗೆ ಚುನಾವಣೆ ಘೋಷಣೆ ಆಗಿರುವುದು ನುಂಗಲಾರದ ತುತ್ತಾಗಿದೆ.
ಅನರ್ಹ ಶಾಸಕರ ಈ ಸ್ಥಿತಿಯ ಲಾಭ ಪಡೆಯಲು ಮಾಜಿ ಶಾಸಕ ರಾಜು ಕಾಗೆ ಮತ್ತೆ ಹಿಡಿತ ಸಾಧಿಸಲು ಸನ್ನದ್ಧರಾಗಿದ್ದಾರೆ. ಕ್ಷೇತ್ರದಲ್ಲಿ ಬಿಡುವಿಲ್ಲದಂತೆ ರಾಜಕೀಯ ಚಟುವಟಿಕೆ ನಡೆಸುತ್ತಿರುವ ಅವರು ಪ್ರತಿಯೊಂದು ಹಳ್ಳಿಯ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವ ಕೆಲಸ ಮಾಡುತ್ತಿದ್ದು, ಸ್ಪರ್ಧೆಗೆ ತಾವು ಸಿದ್ದ ಎಂಬ ಸಂದೇಶ ರವಾನಿಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ ಮತ್ತೊಂದು ಸುತ್ತಿನ ಮಿನಿ ಸಮರಕ್ಕೆ ಕಾಗವಾಡ ಸಜ್ಜಾಗಿದೆ. ಆದರೆ ರಾಜು ಕಾಗೆ ಯಾವ ಪಕ್ಷದಿಂದ ಸ್ಪರ್ದಿಸುತ್ತಾರೆ ಅವರ ಎದುರಾಳಿಗಳು ಯಾರು ಎಂಬುವುದು ಈಗ ಪ್ರಶ್ನೆಯಾಗಿ ಉಳಿದಿದೆ.