ಬೆಳಗಾವಿ: ಚಳಿಗಾಲದ ಅಧಿವೇಶನ ಕೊನೆಯ ದಿನವಾದ ಇಂದು ವಿಧಾನಸಭೆ ಕಲಾಪದ ಆರಂಭದಲ್ಲಿ ಕೋರಂನ ಹಗ್ಗಜಗ್ಗಾಟ ನಡೆಯಿತು. ಸ್ಪೀಕರ್ ಯು.ಟಿ.ಖಾದರ್ ಬೆಳಿಗ್ಗೆ 9 ಗಂಟೆಗೆ ಸದನ ಸಮಾವೇಶಕ್ಕೆ ಸಮಯ ನಿಗದಿ ಮಾಡಿದ್ದರು. ಆದರೆ ಆಡಳಿತ ಪಕ್ಷದ ಕಡೆಯಿಂದ ಕೇವಲ ನಾಲ್ಕೈದು ಮಂದಿ ಶಾಸಕರು ಮಾತ್ರ ಸದನದಲ್ಲಿ ಹಾಜರಿದ್ದರು. ಬಿಜೆಪಿಯಿಂದ ಸುಮಾರು 20ಕ್ಕೂ ಹೆಚ್ಚು ಶಾಸಕರು ಉಪಸ್ಥಿತರಿದ್ದರು. ಆಡಳಿತ ಪಕ್ಷದ ಸಾಲಿನಲ್ಲಿ ಸದಸ್ಯರ ಕೊರತೆ ಇದ್ದುದರಿಂದ ಬಿಜೆಪಿ ಶಾಸಕರು ಸದನ ಕರೆದವರೇ ಸಮಯಕ್ಕೆ ಬಂದಿಲ್ಲ. ನಾವು ಏಕೆ ಹಾಜರಿದ್ದು ಕೋರಂಗೆ ಬೆಂಬಲ ನೀಡಬೇಕು ಎಂದು ಹೇಳುತ್ತಾ ಹೊರನಡೆದರು.
ಸುಮಾರು ಅರ್ಧಗಂಟೆ ಕಾಲ ಸದನದ ಬೆಲ್ ಬಾರಿಸುತ್ತಲೇ ಇತ್ತು. ಕೊನೆಗೆ ಸರ್ಕಾರದ ಮುಖ್ಯ ಸಚೇತಕ ಪಿ.ಎಂ.ಅಶೋಕ್ ಸದನದ ಮೊಗಸಾಲೆಯಲ್ಲಿದ್ದ ಕಾಂಗ್ರೆಸ್ ಶಾಸಕರನ್ನು ಒಳಗೆ ಕರೆತಂದರು. ಆದರೂ ಕೋರಂಗೆ ಸಂಖ್ಯೆ ಸಾಲದಿದ್ದಾಗ ಬಿಜೆಪಿ ಪಾಳಯದತ್ತ ಬಂದು ಹಿರಿಯ ಶಾಸಕ ಸುರೇಶ್ ಕುಮಾರ್ ಅವರಲ್ಲಿ ಮೂರ್ನಾಲ್ಕು ಮಂದಿ ಶಾಸಕರನ್ನು ಒಳಗೆ ಬರುವಂತೆ ಹೇಳಿ, ಕೋರಂ ಆಗುತ್ತಲೆ ಕಲಾಪ ಶುರು ಮಾಡೋಣ ಎಂದು ಮನವಿ ಮಾಡಿಕೊಂಡರು. ಅಷ್ಟರಲ್ಲಿ ಕಾಂಗ್ರೆಸ್ ಶಾಸಕರುಗಳೇ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದಾಗಿ ಕಲಾಪ ಆರಂಭಿಸಿದಾಗ ಬೆಲ್ ನಿಲ್ಲಿಸಲಾಯಿತು.
ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಶಾಸಕ ಜಾರಿ ಬಿದ್ದ ಪ್ರಸಂಗ ವಿಧಾನಸಭೆಯಲ್ಲಿ ಪ್ರಸ್ತಾಪ:ಸುವರ್ಣವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾಸಕರು ಜಾರಿ ಬಿದ್ದ ಪ್ರಸಂಗದ ಸ್ವಾರಸ್ಯಕರ ಚರ್ಚೆ ವಿಧಾನಸಭೆಯಲ್ಲಿ ಇಂದು ನಡೆಯಿತು. ಇಂದು ಪ್ರಶ್ನೋತ್ತರದ ಸಮಯದಲ್ಲಿ ಬಹಳಷ್ಟು ಮಂದಿ ಶಾಸಕರು ಸದನಕ್ಕೆ ತಡವಾಗಿ ಬಂದರು. ಅವರಿಗೆ ಅವಧಿ ಮುಗಿದ್ದಿದರೂ ಕೂಡ ಪ್ರಶ್ನೆ ಕೇಳಲು ಸ್ಪೀಕರ್ ಅವಕಾಶ ಮಾಡಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ರಾಣೆಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೂ ಅವಕಾಶ ಮಾಡಿಕೊಡಲಾಯಿತು. ಈ ವೇಳೆ ಸದನಕ್ಕೆ ಬರಲು ವಿಳಂಬ ಏಕೆ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಪ್ರಶ್ನಿಸಿದರು. ಆಗ ನಿನ್ನೆ ನಡೆದ ಘಟನೆಯನ್ನು ವಿವರಿಸಿದ ಪ್ರಕಾಶ್ ಕೋಳಿವಾಡ ಅವರು, ತಾವು ನಿನ್ನೆ ಸುವರ್ಣವಿಧಾನಸೌಧದಲ್ಲಿ ಮೆಟ್ಟಿಲುಗಳ ಮೇಲೆ ಜಾರಿ ಬಿದ್ದಿದ್ದಾಗಿ ಉತ್ತರಿಸಿದರು. ತಾವು ಮೆಟ್ಟಲಿಳಿಯುವಾಗ ಬಿದ್ದು ಪೆಟ್ಟಾಯಿತು. ಇಂದು ಬೆಳಿಗ್ಗೆ ಎಕ್ಸರೇ ಮಾಡಿಸಿಕೊಳ್ಳಲು ಹೋಗಿದ್ದೆ. ಹೀಗಾಗಿ ತಡವಾಯಿತು ಎಂದು ವಿವರಣೆ ನೀಡಿದರು.
ಕಾಂಗ್ರೆಸ್‍ನ ಶಾಸಕ ಮಹಂತೇಶ್ ಕೌಜಲಗಿ, ಯಾಕೆ ಬಿದ್ದಿರಿ ಎಂದು ಕಿಚಾಯಿಸಿದರು. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಕೂಡ ಅದೇ ರೀತಿಯ ಪ್ರಶ್ನೆಯ ಮೂಲಕ ಕೋಳಿವಾಡ ಅವರ ಕಾಲೆಳೆದರು. ಅದಕ್ಕೆ ಉತ್ತರಿಸಿದ ಪ್ರಕಾಶ್ ಕೋಳಿವಾಡ ಸುವರ್ಣಸೌಧದಲ್ಲಿ ಹಗಲು ಹೊತ್ತಿನಲ್ಲೇ ಬಿದ್ದೆ. ಎಲ್ಲರನ್ನೂ ನಿಮ್ಮಂತೆಯೇ ಎಂದು ಅಂದುಕೊಳ್ಳಬೇಡಿ ಎಂದು ಹಾಸ್ಯಮಿಶ್ರಿತ ಧಾಟಿಯಲ್ಲಿ ತಿರುಗೇಟು ನೀಡಿದರು. ಬಿದ್ದು ಕಾಲು ನೋವಾಗಿದ್ದರೂ ಕ್ಷೇತ್ರದ ಜನರ ಪರವಾಗಿ ಕಾಳಜಿ ಇಟ್ಟುಕೊಂಡು ಕಲಾಪಕ್ಕೆ ಬಂದು ಪ್ರಶ್ನೆ ಕೇಳುತ್ತಿರುವ ಕೋಳಿವಾಡರಿಗೆ ಅಭಿನಂದನೆಗಳು ಎಂದು ಸ್ಪೀಕರ್ ಹೇಳಿದರು.
ಇದನ್ನೂ ಓದಿ:ಡಿ.ಕೆ.ಶಿವಕುಮಾರ್ ಪ್ರಕರಣ: ಬಿಜೆಪಿಯಿಂದ ನಿಲುವಳಿ ಸೂಚನೆ, ಚರ್ಚೆಗೆ ಅವಕಾಶ ನಿರಾಕರಿಸಿದ ಸಭಾಪತಿ