ಬೆಳಗಾವಿ:ಕೇಂದ್ರದಂತೆ ರಾಜ್ಯ ಸರ್ಕಾರವೂ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸುವರ್ಣಸೌಧ ಮುತ್ತಿಗೆಗೆ ಯತ್ನಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಜಮಾವಣೆಗೊಂಡಿದ್ದ ರೈತರು ಸುವರ್ಣಸೌಧದವರೆಗೆ ಪಾದಯಾತ್ರೆಗೆ ನಿರ್ಧರಿಸಿದ್ದರು. ಪಾದಯಾತ್ರೆಗೂ ಮುನ್ನ ಹಿರೇಬಾಗೇವಾಡಿಯ ಬಸವೇಶ್ವರ ಪುತ್ಥಳಿಗೆ ಕೋಡಿಹಳ್ಳಿ ಚಂದ್ರಶೇಖರ ಮಾಲಾರ್ಪಣೆಗೆ ಮುಂದಾದರು. ಆಗ ರೈತರನ್ನು ವಶಕ್ಕೆ ಪಡೆದ ಪೊಲೀಸರು ಒತ್ತಾಯಪೂರ್ವಕವಾಗಿ ಬಸ್ನಲ್ಲಿ ಹತ್ತಿಸಿದರು. ಬಳಿಕ ಸುವರ್ಣಸೌಧ ಎದುರಿನ ಕೊಂಡುಸಕೊಪ್ಪ ಪ್ರತಿಭಟನಾ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ಪೊಲೀಸರು ಹಾಗೂ ರೈತರ ಮಧ್ಯೆ ವಾಗ್ವಾದವೂ ನಡೆಯಿತು.