ಬೆಳಗಾವಿ:ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದೇ ಯುವಕನ ಕೊಲೆಗೆ ಕಾರಣವಾಗಿದೆ ಎಂದು ಆರೋಪಿಸಿ, ದುಷ್ಕೃತ್ಯವೆಸದವರನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಅಂಜುಮನ್-ಎ-ಇಸ್ಲಾಂ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಖಾನಾಪುರ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರ ಹಾಗು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ.
ಖಾನಾಪುರದಲ್ಲಿ ಬೃಹತ್ ಪ್ರತಿಭಟನೆ ಖಾನಾಪುರ ಹೊರವಲಯದಲ್ಲಿ ರೈಲ್ವೆ ಹಳಿ ಮೇಲೆ ಸೆಪ್ಟೆಂಬರ್ 28ರಂದು ಅರ್ಬಾಜ್ ಮುಲ್ಲಾ ಎಂಬ ಯುವಕನ ಮೃತದೇಹ ಪತ್ತೆಯಾಗಿತ್ತು. ಖಾನಾಪುರದಲ್ಲಿ ವೆಹಿಕಲ್ ಬ್ರೋಕರ್ ಆಗಿ ಅವರು ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳಿಂದ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದರಂತೆ. ಇದೇ ಕಾರಣಕ್ಕೆ ಯುವಕನ ಕೊಲೆಯಾಗಿದೆ ಎಂದು ಮೃತನ ತಾಯಿ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ಯುವತಿಯ ತಂದೆ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಘಟನೆ ಖಂಡಿಸಿದ ನಿಂಬಾಳ್ಕರ್:
ಖಾನಾಪುರದಲ್ಲಿ ಹಿಂಸಾತ್ಮಕ ಘಟನೆ ನಡೆದಿದೆ. ಡಿಜಿಪಿ ಜೊತೆ ನಾನು ದೂರವಾಣಿ ಮೂಲಕ ಮಾತನಾಡಿದ್ದೇನೆ. ನಿಷ್ಪಕ್ಷಪಾತ ತನಿಖೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಆ ತಾಯಿಗೆ 24 ವರ್ಷದ ಒಬ್ಬನೇ ಮಗ ಇದ್ದ. ಇಡೀ ಖಾನಾಪುರ ತಾಲೂಕಿನ ತಾಯಂದಿರಿಗೆ ನೋವಾಗಿದೆ. ಆ ನೋವು ಯಾವುದೇ ಧರ್ಮ ಜಾತಿಯದ್ದಲ್ಲ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಹೇಳಿದ್ದಾರೆ.