ಬೆಳಗಾವಿ: ಅಭಿವೃದ್ಧಿ ಸೇರಿ ಮತ್ತಿತರ ವಿಚಾರದಲ್ಲಿ ಉತ್ತರ ಕರ್ನಾಟಕ ತಾರತಮ್ಯಕ್ಕೆ ಒಳಗಾಗುತ್ತಿದೆ. ಈಗ ಹೋರಾಟಗಾರರ ವಿಚಾರದಲ್ಲೂ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಅನುಮಾನ ಮೂಡಿದೆ. ಮೇಕೆದಾಟು ಹೋರಾಟಗಾರರ ಕೇಸ್ ಹಿಂಪಡೆಯಲು ಮುಂದಾಗಿರುವ ಸರ್ಕಾರ, ಗಡಿ ಜಿಲ್ಲೆ ಹೋರಾಟಗಾರರನ್ನು ಮರೆತಿದೆ ಎಂದು ಆರೋಪಿಸಿ ಈ ಭಾಗದ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಹೌದು, ತೀವ್ರ ವಿರೋಧದ ಮಧ್ಯೆ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ 2020ರಲ್ಲಿ ಕನ್ನಡ ಧ್ವಜವನ್ನು ನೆಟ್ಟು ಕನ್ನಡ ಸಂಘಟನೆಗಳು ಸಂಭ್ರಮಿಸಿದ್ದವು. ಇದಾದ ಒಂದು ವರ್ಷದ ಬಳಿಕ ಆ ಧ್ವಜ ಹಳೆಯದಾಗಿದ್ದು, ಹರಿದು ಹೋಗಿದೆ. ಹಾಗಾಗಿ, ಹೊಸ ಧ್ವಜ ಹಾರಿಸಬೇಕು. ನೀವು ಧ್ವಜ ಬದಲಿಸದಿದ್ದರೆ ನಾವೇ ಬದಲಿಸುತ್ತೇವೆ ಎಂದು ಕನ್ನಡ ಹೋರಾಟಗಾರರು ಪಾಲಿಕೆ ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಈ ವೇಳೆ ಅವರನ್ನು ತಡೆದು ಪೊಲೀಸರು ಬಂಧಿಸಿದ್ದರು. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಜೂನ್ 5, 2021ರಲ್ಲಿ ಈ ಸಂಬಂಧ ಕೇಸ್ ಕೂಡ ದಾಖಲಾಗಿತ್ತು.
ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಪ್ರತಿಭಟನೆ ಮಾಡಿದ್ದಿರಿ ಎಂದು 51(ಬಿ) ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಹೋರಾಟಗಾರರನ್ನು ಬಂಧಿಸಲಾಗಿತ್ತು. ಸದ್ಯ ಬೆಳಗಾವಿಯ ಜೆಎನ್ಎಫ್ಸಿ 2ನೇ ನ್ಯಾಯಾಲಯದಲ್ಲಿ ಶ್ರೀನಿವಾಸ ತಾಳೂಕರ್, ಅಕ್ಬರ್ ಸೆಡೇಕರ್, ರೇಷ್ಮಾ ಕಿತ್ತೂರು, ವಾಜೀದ್ ಹಿರೇಕೊಡಿ, ನಾಗೇಶ ಕೊಪ್ಪದ ಸೇರಿ 11 ಜನ ಕನ್ನಡ ಹೋರಾಟಗಾರರ ಮೇಲೆ ವಿಚಾರಣೆ ನಡೆಯುತ್ತಿದೆ.