ಬೆಳಗಾವಿ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿಢೀರ್ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ನೆಗೆಟಿವ್ ವರದಿ ಇಲ್ಲದೇ ಮಹಾರಾಷ್ಟ್ರದಿಂದ ಬೆಳಗಾವಿಗೆ ಪ್ರವೇಶಿಸುವ ಪ್ರಯಾಣಿಕರನ್ನು ಪೊಲೀಸರು ತಡೆದು ಮತ್ತೆ ವಾಪಸ್ ಕಳುಹಿಸುತ್ತಿದ್ದಾರೆ.
ಬೆಳಗಾವಿ ಪ್ರವೇಶಿಸುವ ಪ್ರಯಾಣಿಕರನ್ನು ಹಿಂತಿರುಗಿಸುತ್ತಿರುವ ಪೊಲೀಸರು ಬೆಳಗಾವಿ ಹೊರವಲಯದಲ್ಲಿರುವ ಶಿನ್ನೋಳಿಯಲ್ಲಿ ಗ್ರಾಮದಲ್ಲಿ ಕಳೆದೆರಡು ದಿನಗಳ ಈಚೆಗೆ ಚೆಕ್ ಪೋಸ್ಟ್ ನಿರ್ಮಿಸಿ ಕೊರೊನಾ ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೆ, ಸರ್ಕಾರದ ಆದೇಶ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಬಸ್ ಹಾಗೂ ಕಾರುಗಳಲ್ಲಿ ಸಂಚರಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾತ್ರ ಮಾಡಲಾಗುತ್ತಿದ್ದು, ಕೊರೊನಾ ನೆಗೆಟಿವ್ ವರದಿ ಕೇಳುತ್ತಿಲ್ಲ ಎನ್ನಲಾಗುತ್ತಿದೆ.
ಇತ್ತ ಬೈಕ್ ,ಲಾರಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಸಂಚರಿಸುವ ಜನರ ಆರೋಗ್ಯ ತಪಾಸಣೆ ಆಗಲಿ, ಕೋವಿಡ್ ನೆಗೆಟಿವ್ ವರದಿಯನ್ನಾಗಲಿ ಅಥವಾ ಅವರ ಮಾಹಿತಿಯನ್ನು ಪಡೆದುಕೊಳ್ಳದೇ ಪರಿಶೀಲನೆ ಮಾಡುತ್ತಿಲ್ಲ. ಈ ಬಗ್ಗೆ ಅಲ್ಲಿನ ಸಿಬ್ಬಂದಿ ಕೇಳಿದರೆ, ಇಲಾಖೆ ಅಧಿಕಾರಿಗಳು ಕಾರು ಮತ್ತು ಬಸ್ಗಳಲ್ಲಿ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ಹಾಗೂ ಕೋವಿಡ್ ನೆಗೆಟಿವ್ ವರದಿ ಪರಿಶೀಲನೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಮಾತ್ರ ತಪಾಸಣೆ ಮಾಡಲಾಗುತ್ತಿದ್ದು, ಕೋವಿಡ್ ನೆಗೆಟಿವ್ ವರದಿ ಇಲ್ಲದ ಮಹಾರಾಷ್ಟ್ರದ ಜನರಿಗೆ ರಾಜ್ಯಕ್ಕೆ ಪ್ರವೇಶ ನೀಡದೇ ವಾಪಸ್ ಕಳುಹಿಸಲಾಗುತ್ತಿದೆ ಎನ್ನುತ್ತಾರೆ.
ಓದಿ: ಸ್ಫೋಟ ಪ್ರಕರಣದಲ್ಲಿ ನಮ್ಮ ಮಾವನ ಮಕ್ಕಳು ಯಾರೂ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ
ಇದಲ್ಲದೆ ಶಿನ್ನೋಳಿ ಗ್ರಾಮದಿಂದ ಮಹಾರಾಷ್ಟ್ರ ರಾಜ್ಯದ ಗಡಿ ಸಂಪರ್ಕಿಸಿ ನಂತರ ಬೆಳಗಾವಿ ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶ ಜನರ ಆಧಾರ ಕಾರ್ಡ್ಗಳನ್ನು ಪರಿಶೀಲಿಸಿ ಅವಕಾಶ ನೀಡಲಾಗುತ್ತಿದ್ದು, ಸಮೀಪದ ಹಳ್ಳಿಯ ಜನರ ಆರೋಗ್ಯ ತಪಾಸಣೆ ಮಾಡಿ ಅವರನ್ನು ಒಳಗಡೆ ಬಿಡಲಾಗುತ್ತಿದೆ. ಮಹಾರಾಷ್ಟ್ರದ ವಿವಿಧ ಜಿಲ್ಲೆಗಳು ಸೇರಿದಂತೆ ಪುಣೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿವೆ. ಹೀಗಾಗಿ ಶಿನ್ನೋಳಿ ಚೆಕ್ ಪೋಸ್ಟ್ನಲ್ಲಿ ಮತ್ತಷ್ಟು ಸಿಬ್ಬಂದಿಯನ್ನು ನೇಮಿಸಿ ಕೊರೊನಾ ತಡೆಗೆ ಇನ್ನಷ್ಟು ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.