ಕರ್ನಾಟಕ

karnataka

ಪೀರನವಾಡಿ ವಿವಾದ ಸಂಘರ್ಷಗಳಿಲ್ಲದೆ ಮುಗಿದಿರುವುದು ಸಂತೋಷ ತಂದಿದೆ: ಸಚಿವ ಈಶ್ವರಪ್ಪ

By

Published : Aug 29, 2020, 11:45 AM IST

ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ವಿವಾದ ಸಂಘರ್ಷಗಳಿಲ್ಲದೆ ಬಗೆಹರಿದಿರುವುದು ಸಂತೋಷ ತಂದಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

Minister KS Eshwarappa
ಸಚಿವ ಕೆ.ಎಸ್.ಈಶ್ವರಪ್ಪ

ಬೆಳಗಾವಿ:ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಆಗಿರುವ ತೀರ್ಮಾನ ಇಡೀ ದೇಶದ ರಾಷ್ಟ್ರಭಕ್ತರಿಗೂ ಸಂತೋಷ ಆಗಿದೆ ಎಂದು ಪಂಚಾಯತ್ ರಾಜ್​ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶಿವಾಜಿ ಸರ್ಕಲ್ ಎಂದು ಕೈಗೊಳ್ಳಲಾದ ನಿರ್ಣಯ ದೇಶದ ಎಲ್ಲಾ ದೇಶಭಕ್ತರಿಗೂ ಸಂತೋಷವಾಗಿದೆ. ಭಾಷೆ, ಪ್ರಾಂತ್ಯ ಎಲ್ಲವನ್ನೂ ಮೀರಿದ ಇಬ್ಬರು ಮಹಾಪುರುಷರನ್ನು ಇವತ್ತು ಗೌರಯುತವಾಗಿ ನಡೆಸಿಕೊಳ್ಳಬೇಕೆಂದು ಬೆಳಗಾವಿಯಲ್ಲಿನ ನಿರ್ಣಯ ತೋರಿಸಿಕೊಟ್ಟಂತಾಗಿದೆ ಎಂದರು.

ಕೆ.ಎಸ್.ಈಶ್ವರಪ್ಪ, ಸಚಿವ

ಇಷ್ಟು ಸುಲಭವಾಗಿ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ವಿವಾದ ಸಂಘರ್ಷಗಳಿಲ್ಲದೆ ಪರಿಹಾರ ಸಿಗುತ್ತೆ ಎಂದು ನನಗೆ ಅನಿಸಿರಲಿಲ್ಲ. ಇವತ್ತು ನಾನು ತುಂಬಾ ಸಂತೋಷದಿಂದ ಹೇಳುತ್ತಿದ್ದೇನೆ. ರಾಯಣ್ಣ ಮತ್ತು‌ ಶಿವಾಜಿ ಇಬ್ಬರ ಪ್ರಯತ್ನದಿಂದ ಎರಡೂ ರಾಜ್ಯಗಳಲ್ಲಿ ಭಾವೈಕ್ಯತೆ ಮೂಡಿದ್ದು, ಈ ಇಬ್ಬರು ಮಹಾಪುರುಷರು ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ್ದಾರೆ. ಇವರಿಬ್ಬರ ಬಗ್ಗೆಯೂ ಯಾವುದೋ ಕಾರಣಕ್ಕಾಗಿ ಕರ್ನಾಟಕ ಮತ್ತು‌ ಮಹಾರಾಷ್ಟ್ರಲ್ಲಿ ಸಂಕುಚಿತ ಭಾವನೆ ಮೂಡಿರಬಹುದು. ಆದ್ರೆ, ನಿನ್ನೆ ರಾತ್ರಿ ಆಗಿರುವ ನಿರ್ಣಯಕ್ಕೆ ದೇಶದ ಎಲ್ಲಾ ಜನರು ಸಂತೋಷ ಪಟ್ಟಿದ್ದಾರೆ. ನಮ್ಮಲ್ಲಿ‌ ಮರಾಠಿ-ಕನ್ನಡ ಎಂಬ ಪ್ರಶ್ನೆ ಇಲ್ಲ. ಜತೆಗೆ ಜಾತೀಯತೆಯ ಪ್ರಶ್ನೆಯೂ ಇಲ್ಲ. ಎಲ್ಲವನ್ನೂ ಮೀರಿ ರಾಷ್ಟ್ರೀಯತೆ ದಿಕ್ಕಿನಲ್ಲಿ ಆಗಿರೋ ತೀರ್ಮಾನ ಸಣ್ಣಪುಟ್ಟ ಗೊಂದಲಗಳಿರುವ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಕನ್ನಡಪರ ಹೋರಾಟಗಾರ ಮೇಲೆ ಹಾಕಿರುವ ಕೇಸ್​ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದ ಕುರಿತು ಈಗಾಗಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರ ಜೊತೆಗೆ ಮಾತನಾಡಿದ್ದೇನೆ. ಅವ್ರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಯಾರ ಯಾರ ಮೇಲೆ ಪ್ರಕರಣಗಳು ದಾಖಲು ಆಗಿದ್ದಾವೆ ಅವರೆಲ್ಲರ ಮೇಲಿನ ಕೇಸ್​ಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಪೀರನವಾಡಿಗೆ ಭೇಟಿ ನೀಡುವ ಕುರಿತು ತಿಳಿಸುತ್ತೇನೆ‌. ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಪ್ರಕರಣದಲ್ಲಿ ಉಸ್ತುವಾರಿ ಸಚಿವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ABOUT THE AUTHOR

...view details