ಬೆಳಗಾವಿ:ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿನ್ನೆ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಏಕಾಏಕಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಮುಂಗಾರು ಪೂರ್ವ ಮಳೆಗೆ ಹಲವು ಕಡೆ ಅವಾಂತರ ಸೃಷ್ಟಿಯಾಗಿದ್ದು, ಮುಂದಿನ ತಿಂಗಳಿಂದ ಆರಂಭವಾಗುವ ಮಾನ್ಸೂನ್ ಮಳೆ ಏನೆಲ್ಲಾ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಜನ ಆತಂಕಕ್ಕೀಡಾಗಿದ್ದಾರೆ.
ಕಳೆದ ರಾತ್ರಿ ಗುಡುಗು ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ, ಅಲ್ಲಲ್ಲಿ ಗಿಡ, ಮರಗಳು ಧರೆಗುರುಳಿರುವ ಪರಿಣಾಮ ಜನರು ಪರದಾಡುವಂತಾಯಿತು. ವಿವಿಧ ಕೆಲಸಗಳಿಗೆ ನಗರಕ್ಕೆ ಆಗಮಿಸಿದ್ದ ಸಾರ್ವಜನಿಕರು, ಅಂಗಡಿ, ಮಾಲ್, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಮನೆಗಳಿಗೆ ತಲುಪಲು ಹೈರಾಣಾದರು. ಅನೇಕ ಕಡೆ ರಸ್ತೆಗಳ ಮೇಲೆ ಮರ ಉರುಳಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಯಿತು. ಬೈಕ್ ಮೇಲೆ ಹೋಗುವವರು, ಪಾದಚಾರಿಗಳು ಎಲ್ಲಿ ಮರ ನಮ್ಮ ಮೈಮೇಲೆ ಬಿದ್ದಿತ್ತು ಎಂದು ಜೀವ ಭಯದಲ್ಲಿ ರಸ್ತೆ ಪಕ್ಕದ ಅಂಗಡಿ, ಹೋಟೆಲ್ಗಳಲ್ಲಿ ಆಶ್ರಯಿಸಿದ ದೃಶ್ಯಗಳು ಎಲ್ಲೆಡೆ ಕಂಡುಬಂದವು.
ಶಿವಬಸವ ನಗರದ ಗ್ಯಾಂಗವಾಡಿ ಪ್ರದೇಶದಲ್ಲಿ ಗಾಳಿಯ ರಭಸಕ್ಕೆ ಮನೆಯ ಮೇಲ್ಛಾವಣಿ ಹಾರಿದ ಪರಿಣಾಮ ಆರು ಮನೆಗಳಿಗೆ ಹಾನಿ ಉಂಟಾಗಿದೆ. ಇನ್ನು ಮನೆಯೊಳಗೆ ನೀರು ನುಗ್ಗಿದ್ದರಿಂದ ಹಲವು ಕುಟುಂಬಗಳು ನೆರೆಹೋರೆಯವರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಗ್ಯಾಂಗವಾಡಿ ಸಂತ್ರಸ್ತ ಡಾನ್ ಚೌಗುಲೆ ಈಟಿವಿ ಭಾರತ ಜೊತೆ ಮಾತನಾಡಿ, ಮಳೆ-ಗಾಳಿಗೆ ಮನೆ ಮೇಲಿನ ಶೀಟ್ ಬಿದ್ದು ಐದು ಮನೆಗಳಿಗೆ ಹಾನಿಯಾಗಿದೆ. ನಮಗೆ ಏನು ಮಾಡಬೇಕು ಅಂತಾ ಗೊತ್ತಾಗುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಬಂದು ಹೋಗಿದ್ದಾರೆ. ಸರ್ಕಾರ ಮನೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.