ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಹಾಗೂ ಕೃಷ್ಣಾ ನದಿ ತೀರದಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಕೃಷ್ಣಾ ನದಿ ತೀರದ ಗ್ರಾಮಗಳ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರನ್ನು ಭೇಟಿ ಮಾಡಿದ ಹಂಗಾಮಿ ಸಿಎಂ ಯಡಿಯೂರಪ್ಪ, ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ಸಾಕಷ್ಟು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಸಂತ್ರಸ್ತರನ್ನು ನೋಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತಕ್ಕೆ ಶಬ್ಬಾಷ್ ಗಿರಿ ನೀಡಿ ಹೋದರು. ಆದರೆ, ರಾಯಭಾಗದ ನೂರಾರು ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಿಲ್ಲದೇ ಮಳೆಯ ನಡುವೆ ರಸ್ತೆಗಳ ಮೇಲೆ ಸಂತ್ರಸ್ತರು ರಾತ್ರಿಯಿಡಿ ಚಳಿಯಲ್ಲಿ ವಾಸವಾಗಿದ್ದಾರೆ.
ರಸ್ತೆಯ ಮೇಲೆ ಮಲಗಿದ ಜನ:
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದ ಬಳಿ ರಾತ್ರಿ ಸಮಯದಲ್ಲಿ ಅಪಾರ ಪ್ರಮಾಣದಲ್ಲಿ ನೀರಿನ ಹರಿವು(ಕೃಷ್ಣ ನದಿ) ಹೆಚ್ಚಾಗಿದ್ದರಿಂದ ಮನೆಗಳಿಗೆ ಹಾಗೂ ಗುಡಿಸಲುಗಳಿಗೆ ನೀರು ಬಂದಿದ್ದು, ರಾತ್ರೋರಾತ್ರಿ ಮನೆ ಖಾಲಿ ಮಾಡಿದರು. ಚಿಂಚಲಿ ಪಟ್ಟಣದ ಹತ್ತಾರು ಕುಟುಂಬಗಳು ಕೊರೆಯುವ ಚಳಿಯಲ್ಲಿ ರಸ್ತೆಯ ಮೇಲೆ ಮಲಗಿರುವ ದೃಶ್ಯಗಳು ಕಂಡು ಬಂದಿದೆ.