ಬೆಳಗಾವಿ: ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿ ಬರುವ ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರು, ಸೇವೆ ಕಾಯಂಮಾತಿ, ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಳಗಾವಿ ಸುವರ್ಣ ಗಾರ್ಡನ್ ಬಳಿಯ ಟೆಂಟ್ ನಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹ : ಕರ್ನಾಟಕ ಎಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದಿಂದ ಕೈಗೊಂಡಿದ್ದ ಧರಣಿಯಲ್ಲಿ, ಹಲವಾರು ವರ್ಷಗಳಿಂದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕಡಿಮೆ ಸಂಬಳದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಾಗಿ ಹಿಂದಿನ ಸರ್ಕಾರ ಹಾಗೂ ಪ್ರಸ್ತುತ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕೂಡ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಹೀಗಾಗಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ಬೇಡಿಕೆಗೆ ತಕ್ಷಣ ಸರ್ಕಾರ ಸ್ಪಂದಿಸಬೇಕು ಎಂದು ಸರ್ಕಾರಿ ಎಂಜಿನಿಯರಿಂಗ್ ಅರೆ ಕಾಲಿಕ ಉಪನ್ಯಾಸಕರು ಆಗ್ರಹಿಸಿದರು.
ಈ ವೇಳೆ, ಅರೆಕಾಲಿಕ ಉಪನ್ಯಾಸಕ ಮನುಕುಮಾರ ಮಾತನಾಡಿ, ಕಾಲೇಜಿನಲ್ಲಿ ಡಿ ಗ್ರೂಪ್ ನಲ್ಲಿ ಕೆಲಸ ಮಾಡುವವರಿಗೆ 16 ಸಾವಿರ ರೂಪಾಯಿ ಸಂಬಳವಿದ್ದರೆ, ನಮಗೆ 15 ಸಾವಿರ ನೀಡುತ್ತಾರೆ. ಕೂಲಿ ಕೆಲಸಕ್ಕೆ ಹೋಗುವವರಿಗೂ ಇನ್ನು ಹೆಚ್ಚು ಸಂಬಳ ಬರುತ್ತದೆ. ರಾಜ್ಯದ 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 300 ಜನ ಅರೆಕಾಲಿಕ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. 2011ರ ಬಳಿಕ ನೇಮಕಾತಿ ಆಗಿಲ್ಲ. ಹಾಗಾಗಿ ನಮ್ಮ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು. ಗೀತಾ ದೇಸಾಯಿ ಮಾತನಾಡಿ, ಕಡಿಮೆ ವೇತನದಿಂದ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ನಮ್ಮ ಸಮಸ್ಯೆ ಎಲ್ಲರಿಗೂ ಗೊತ್ತಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪಾಲಿಟೆಕ್ನಿಕ್ ಕಾಲೇಜು ಅರೆಕಾಲಿಕ ಉಪನ್ಯಾಸಕರು:ಅಖಿಲ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದಿಂದ ಕೈಗೊಂಡಿದ್ದ ಧರಣಿಯಲ್ಲಿ ರಾಜ್ಯ ಸರ್ಕಾರ 89 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 1 ಸಾವಿರಕ್ಕಿಂತ ಹೆಚ್ಚು ಜನ ಅರೆಕಾಲಿಕ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದೇವೆ. ಉನ್ನತ ಶಿಕ್ಷಣ ಪಡೆದಿರುವ ನಮಗೆ ವರ್ಷಕ್ಕೊಮ್ಮೆ ಅತ್ಯಂತ ಕಡಿಮೆ ಸಂಬಳ ನೀಡುತ್ತಿದ್ದಾರೆ. ಅಲ್ಲದೇ ನೇಮಕಾತಿಯಲ್ಲಿಯೂ ಮಾರ್ಪಾಡು ಮಾಡ್ತಿರುವುದು ಸರಿಯಲ್ಲ. ಸಾವಿರಾರು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಮ್ಮ ಭವಿಷ್ಯ ಅತಂತ್ರವಾಗಿದೆ. ಈಗಾಗಲೇ ನಾಲ್ಕು ಜನ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರು ಅಳಲು ತೋಡಿಕೊಂಡರು.