ಬೆಳಗಾವಿ: ಈ ಬಾರಿ ಮಳೆರಾಯ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಜೂನ್ ಮೂರನೇ ವಾರ ಬಂದರೂ ಮಳೆಯಾಗದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದ ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಹೌದು. ಬೆಳಗಾವಿ ಸುತ್ತಮುತ್ತಲಿನ ರೈತರು ಅಧಿಕವಾಗಿ ಭತ್ತವನ್ನೆ ಬೆಳೆಯುತ್ತಾರೆ. ಉತ್ತಮ ಮುಂಗಾರು ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಇಲ್ಲಿನ ವಡಗಾವಿ, ಅನಗೋಳ ಮತ್ತು ತಾಲೂಕಿನ ಯಳ್ಳೂರು ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರು ಮೇ ತಿಂಗಳ 3 ಮತ್ತು 4ನೇ ವಾರದಲ್ಲೇ ಭತ್ತದ ಒಣ ಬಿತ್ತನೆ ಆರಂಭಿಸಿದ್ದರು.
ಅಲ್ಲದೇ ಕೆಲ ರೈತರು ನಾಟಿಗಾಗಿ ಭತ್ತದ ಸಸಿ ಕೂಡ ಬೆಳೆಸಿದ್ದರು. ಆದರೆ, ಈಗ ಮಳೆ ಕೈಕೊಟ್ಟಿದ್ದರಿಂದ ಒಂದೆಡೆ ಮೊಳಕೆಯೊಡೆದಿದ್ದ ಬೀಜಗಳು ಭೂಮಿಯಲ್ಲೇ ಕಮರಿ ಹೋಗುತ್ತಿದ್ದರೆ, ಮತ್ತೊಂದೆಡೆ ನಾಟಿ ಮಾಡಿದ್ದ ಭತ್ತದ ಸಸಿಗಳೂ ಒಣಗುತ್ತಿವೆ. ಇನ್ನು ಭತ್ತದ ಸಸಿಗಳನ್ನು ಉಳಿಸಿಕೊಳ್ಳಬೇಕು ಎಂದು ಕೊಡದಿಂದ ನೀರು ಹಾಕುವ ಪ್ರಯತ್ನವನ್ನು ರೈತರು ಮಾಡುತ್ತಿದ್ದಾರೆ.
ಕೊಡದಿಂದ ನೀರು ಹಾಕುತ್ತಿದ್ದ ಯಳ್ಳೂರು ರೈತ ಹಣಮಂತ ಕುಗಜಿ ಮಾತನಾಡಿ, ಮಳೆಯಾದ ನಂತರ ನಾಟಿ ಮಾಡಲು ಭತ್ತದ ಸಸಿ ಬೆಳೆಸುತ್ತಿದ್ದೇನೆ. ಮಳೆ ಅಭಾವದಿಂದ ಅವು ಒಣಗುತ್ತಿವೆ. ಕೊಳವೆಬಾವಿ ಇದೆ. ಆದರೆ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಸಸಿಗಳಿಗೆ ನೀರು ಬಿಡಲು ಆಗುತ್ತಿಲ್ಲ. ಹೀಗಾಗಿ ಕೊಡದಲ್ಲಿ ನೀರು ತುಂಬಿಕೊಂಡು ಬಂದು ಸಸಿಗಳಿಗೆ ನೀರು ಹಾಕುತ್ತಿದ್ದೇನೆ ಎಂದು ತಿಳಿಸಿದರು.
ಇನ್ನು ಬೆಳಗಾವಿ ತಾಲೂಕಿನ ಯಳ್ಳೂರು, ಶಹಾಪುರ, ವಡಗಾವಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭತ್ತವೇ ಪ್ರಮುಖ ಬೆಳೆ. ಬೆಳಗಾವಿ ತಾಲೂಕಿನ 2 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಾಸುಮತಿ, ಇಂದ್ರಾಯಿಣಿ ತಳಿಯ ಭತ್ತ ಬೆಳೆಯಲಾಗುತ್ತದೆ. ಈ ಬಾರಿ ಇನ್ನೂ ಮಳೆಯಾಗದ ಹಿನ್ನೆಲೆಯಲ್ಲಿ ಭತ್ತದ ಉತ್ಪಾದನೆ ಕಡಿಮೆಯಾಗಿ ಅಕ್ಕಿ ಕೊರತೆ ಆಗುವ ಸಾಧ್ಯತೆಯಿದೆ.