ಬೆಳಗಾವಿ:ಕಳೆದ ತಿಂಗಳು ಉಂಟಾದ ಭೀಕರ ಪ್ರವಾಹದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 11,000 ಕೋಟಿ ರೂ.ಗಳಷ್ಟು ಮನೆ, ಬೆಳೆ ಹಾಗೂ ಪ್ರಾಣಹಾನಿ ಸಂಭವಿಸಿದೆ. ಈಗಾಗಲೇ ರಾಜ್ಯ ಸರ್ಕಾರ 867 ಕೋಟಿ ರೂ. ಪರಿಹಾರ ರೂಪದಲ್ಲಿ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಪ್ರವಾಹದಲ್ಲಿ ತೀವ್ರ ಹಾನಿಗೊಳಗಾದ ಜಿಲ್ಲೆಯಲ್ಲಿ ಬೆಳಗಾವಿಯೂ ಒಂದು. ರಾಜ್ಯ ಸರ್ಕಾರದಿಂದ ಈಗಾಗಲೇ ಸುಮಾರು 867 ಕೋಟಿಯಷ್ಟು ಪರಿಹಾರ ಹಣ ಬಿಡುಗಡೆಯಾಗಿದೆ. ಇಲ್ಲಿಯವರೆಗೆ 113.11 ಕೋಟಿ ಹಣ ಸಂತ್ರಸ್ತರಿಗೆ ನೀಡಲಾಗಿದ್ದು, ಬರುವ ದಿನಗಳಲ್ಲಿ ಫಲಾನುಭವಿಗಳಿಗೆ ಪರಿಹಾರ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಪ್ರವಾಹ ಹಾಗೂ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 34 ಸಾವಿರ ಮನೆಗಳು ಹಾನಿಗೊಳಗಾಗಿವೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ 10 ತಿಂಗಳವರೆಗೆ ಬಾಡಿಗೆ ವಾಸವಿರಲು ಪ್ರತಿ ತಿಂಗಳಿಗೆ ಐದು ಸಾವಿರದಂತೆ ನೀಡಲಾಗುತ್ತಿದೆ. ಇದರಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಳ್ಳುವವರಿಗೆ 50 ಸಾವಿರ ರೂ. ಪರಿಹಾರ ರೂಪದಲ್ಲಿ ನೀಡಲಾಗುವುದು. ಇಲ್ಲಿಯವರೆಗೆ 1,160 ಮನೆ ಕಳೆದುಕೊಂಡವರಿಗೆ ಶೆಡ್ ನಿರ್ಮಾಣಕ್ಕಾಗಿ 580 ಲಕ್ಷ ರೂ. ಹಾಗೂ 2,551 ಫಲಾನುಭವಿಗಳಿಗೆ ಮಾಸಿಕ ಬಾಡಿಗೆಯಂತೆ 127.55 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರವಾಹದಲ್ಲಿ ಸುಮಾರು 2.21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಗೊಳಗಾಗಿದೆ. ಇದರಲ್ಲಿ ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆ ಎರಡೂ ಸೇರಿದ್ದು ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ನೀಡುವ ಎನ್ಡಿಆರ್ಎಫ್ ನಿರ್ದೇಶನದಂತೆ ಬೆಳೆ ಹಾನಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.