ಚಿಕ್ಕೋಡಿ: ಸರ್ಕಾರ ಸರ್ವ ಶಿಕ್ಷಣ ಅಭಿಯಾನದಡಿ ಉಚಿತ ಹಾಗೂ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಆದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳಿಗೆ ಕೂರಲು ಸಹ ಸ್ಥಳಾವಕಾಶವಿಲ್ಲದೆ ಸಮುದಾಯ ಭವನಗಳಲ್ಲಿ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ.
ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಬಗ್ಗೆ ಅಧಿಕಾರಿಗಳು ಹಾಗೂ ಸ್ಥಳೀಯ ಪ್ರಭಾವಿ ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಜೋಡಕುರಳಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯು 1939 ರಲ್ಲಿ ಆರಂಭವಾಗಿದ್ದು ಈ ಶಾಲೆಯಲ್ಲಿ ಒಟ್ಟು ಸುಮಾರು 650 ರಷ್ಟು ವಿದ್ಯಾರ್ಥಿಗಳಿದ್ದು, 1 ನೇ ತರಗತಿಯಿಂದ 8 ನೇಯ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದೆ.
ಶಿಕ್ಷಕರ ಕೊರತೆ:
ಜೊತೆಗೆ ಈ ಶಾಲೆಯೂ ಶಿಕ್ಷಕರ ಕೊರತೆಯನ್ನು ಅನುಭವಿಸುತ್ತಿದೆ. ಇಲ್ಲಿಗೆ ಒಟ್ಟು 23 ಶಿಕ್ಷಕರ ಅಗತ್ಯವಿದ್ದು, ಈ ಪೈಕಿ 10 ಶಿಕ್ಷಕರು ಮಾತ್ರ ಇದ್ದು, ಸುಮಾರು 13 ಶಿಕ್ಷಕರ ಕೊರತೆ ಇದೆ. ಇನ್ನು ಒಟ್ಟು ಆರು ಕೊಠಡಿಗಳಲ್ಲಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯನ್ನು ನಡೆಸಲಾಗುತ್ತಿದ್ದು, ಅದರಲ್ಲಿ ಒಂದು ಅಡುಗೆಗಾಗಿ ಹಾಗೂ ಮತ್ತೊಂದು ಶಿಕ್ಷಕರಿಗಾಗಿ ಇದ್ದು, ಉಳಿದ ನಾಲ್ಕು ಕೊಠಡಿಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಗೆ ಒಟ್ಟು 10 ಕೊಠಡಿಗಳ ಅವಶ್ಯಕತೆ ಇದೆ ಎಂದು ಜೋಡಕುರಳಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಬಿ.ಜಿ. ಬಾಗವಾನ ಸಮಸ್ಯೆ ಬಿಚ್ಚಿಟ್ಟರು.