ಬೆಳಗಾವಿ: ಹೊಲದಲ್ಲಿ ಕಿಡಿಗೇಡಿಗಳು ಎಸೆದು ಹೋಗಿದ್ದ ಮದ್ಯದ ಬಾಟಲಿ, ಪ್ಲಾಸ್ಟಿಕ್ ಕಪ್ ಮತ್ತು ಚೀಲಗಳನ್ನು ಸ್ವಚ್ಛಗೊಳಿಸುವ ಮೂಲಕ ಬೆಳಗಾವಿಯಲ್ಲಿ ರೈತರು ವಿಭಿನ್ನವಾಗಿ ರಾಷ್ಟ್ರೀಯ ರೈತ ದಿನ ಆಚರಿಸಿದರು.
ಹೌದು ಬೆಳಗಾವಿ ಯಳ್ಳೂರ ರಸ್ತೆಯ ರೈತರ ಜಮೀನುಗಳಲ್ಲಿ ಕಿಡಿಗೇಡಿಗಳು ರಾತ್ರಿ ಹೊತ್ತು ಪಾರ್ಟಿ ಮಾಡಿ ಎಣ್ಣೆ ಬಾಟಲಿ ಸೇರಿ ಮತ್ತಿತರ ವಸ್ತುಗಳನ್ನು ಬೀಸಾಕಿ ಹೋಗುತ್ತಾರೆ. ಇದರಿಂದ ಕೃಷಿ ಚಟುಚಟಿಕೆಗಳಿಗೆ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ. ಈ ಬಗ್ಗೆ, ಸಂಬಂಧಿಸಿದ ಅಧಿಕಾರಿಗಳು ಮತ್ತು ಪೊಲೀಸರಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಡಿಸೆಂಬರ್ 23 ರಾಷ್ಟ್ರೀಯ ರೈತ ದಿನದ ಹಿನ್ನೆಲೆ ಇಂದು ರೈತರ ಹೊಲದಲ್ಲಿ ಬಿದ್ದಿದ್ದ ಸಾರಾಯಿ ಬಾಟಲಿ ಮತ್ತು ಕಸವನ್ನು ಹೊರತೆಗೆದು ಅರ್ಥಪೂರ್ಣವಾಗಿ ರೈತರ ದಿನ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡ ಪ್ರಕಾಶ ನಾಯಿಕ, ಕುಡುಕರ ಹಾವಳಿಯಿಂದ ಕೃಷಿ ಕೆಲಸಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇಂದು ಮಾಜಿ ಪ್ರಧಾನಿ ಚರಣಸಿಂಗ್ ಚೌಧರಿ ಅವರ ಜನ್ಮದಿನ ನಿಮಿತ್ತ ಹೊಲದಲ್ಲಿ ಸ್ವಚ್ಛತೆ ಕೈಗೊಂಡಿದ್ದೇವೆ. ಇನ್ಮುಂದೆ ಈ ರೀತಿ ಬಾಟಲಿಗಳು ನಮ್ಮ ಹೊಲದಲ್ಲಿ ಕಂಡು ಬಂದರೆ ಅವೆಲ್ಲವನ್ನೂ ಡಿಸಿ, ಮಹಾನಗರ ಪಾಲಿಕೆ, ಅಬಕಾರಿ ಇಲಾಖೆ ಮುಂದೆ ನಾವು ಬೀಸಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.