ಬೆಳಗಾವಿ :ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಹಿನ್ನೆಲೆ ಕನ್ನಡ ಸಂಘಟನೆ ಮುಖಂಡರ ಜೊತೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಹತ್ವದ ಸಭೆ ನಡೆಸಿದರು.
ಕನ್ನಡ ಸಂಘಟನೆ ಮುಖಂಡರ ಜತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಭೆ.. ಜಿಪಂ ಕಚೇರಿಯಲ್ಲಿ ಈರಣ್ಣ ಕಡಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ರಾಜ್ಯದ ಕೇಂದ್ರ ಸಚಿವರು, ಸಂಸದರ ವರ್ತನೆಗೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆ ಅಧಿವೇಶನದಲ್ಲಿ ಶಿವಸೇನೆ ಸಂಸದ ಗಡಿವಿವಾದ ಕೆದಕಿದರೂ ನೀವೇಕೆ ಸುಮ್ಮನಿದ್ರಿ?. ತಿರುಗೇಟು ನೀಡಬೇಕಿತ್ತು.
ಮುಂದೆ ರಾಜ್ಯದ ಪರವಾಗಿ ಉಭಯ ಸದನಗಳಲ್ಲಿ ಗಟ್ಟಿ ಧ್ವನಿ ಎತ್ತಬೇಕು ಎಂದು ಕನ್ನಡ ಹೋರಾಟಗಾರರು ರಾಜ್ಯಸಭಾ ಸದಸ್ಯರ ಮೂಲಕ ಎಲ್ಲಾ ಸಚಿವರು ಹಾಗೂ ಸಂಸದರನ್ನು ಒತ್ತಾಯಿಸಿದರು. ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋರ್ಟಿನಲ್ಲಿದ್ದರೂ ಮಹಾ ಸರ್ಕಾರ ಪದೇಪದೆ ಗಡಿ ವಿವಾದ ಕೆದಕುತ್ತಿದೆ.
ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವರು, ಸಂಸದರು ರಾಜ್ಯದ ಪರ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಗಡಿ ವಿವಾದ ಕೆದಕುತ್ತಿರುವ ಶಿವಸೇನೆ, ಎಂಇಎಸ್ ಹಾಗೂ ಎನ್ಸಿಪಿಗೆ ಮೂಗುದಾರ ಹಾಕಬೇಕು.
ಬಸವರಾಜ್ ಬೊಮ್ಮಾಯಿ ಅವರನ್ನೇ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಬೇಕು. ಈ ಸಂಬಂಧ ತಾವು ಮುಖ್ಯಮಂತ್ರಿಗಳ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕನ್ನಡ ಸಂಘಟನೆ ಮುಖಂಡರ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೇನೆ.
ಅವರೆಲ್ಲರ ಅಹವಾಲು ಆಲಿಸಿದ್ದೇನೆ. ಅವರೆಲ್ಲರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಗಡಿ ವಿಚಾರದ ಸಂಬಂಧ ತಿರುಗೇಟು ನೀಡಲು ನಮ್ಮ ಸಂಸದರಿಗೂ ಹೇಳುತ್ತೇನೆ ಎಂದರು.