ಅಥಣಿ: ತಾಲೂಕಿನಲ್ಲಿ ಕಬ್ಬು ಹಂಗಾಮು ಪ್ರಾರಂಭವಾಗಿದ್ದರಿಂದ ಹಲವಾರು ರಸ್ತೆಗಳು ಹದಗೆಟ್ಟ ಪರಿಣಾಮವಾಗಿ ರೈತರೇ ರಸ್ತೆ ರಿಪೇರಿ ಕಾರ್ಯಕ್ಕೆ ಮುಂದಾಗಿರುವುಕ್ಕೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ.
ಹಂತ ಹಂತವಾಗಿ ರಸ್ತೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು: ಶಾಸಕ ಮಹೇಶ್ ಕುಮಟಳ್ಳಿ
ಅಥಣಿ ತಾಲೂಕಿನ ರೈತರೇ ರಸ್ತೆ ರಿಪೇರಿ ಕಾರ್ಯಕ್ಕೆ ಮುಂದಾಗಿದ್ದು, ಅಥಣಿ ಶಾಸಕರು ಪ್ರತಿಕ್ರಿಯೆ ನೀಡಿ ಸದ್ಯದಲ್ಲೇ ರಸ್ತೆ ರಿಪೇರಿ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಹಲವಾರು ತಾಲೂಕುಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಪರತರವಾಡಿ ಗ್ರಾಮದಲ್ಲಿ ಮಾತನಾಡಿದ ಅವರು, ತಾಲೂಕಿನ ಕೃಷ್ಣಾ ನದಿ ಪ್ರವಾಹದಿಂದ ಹಾಗೂ ವಿಪರೀತ ಮಳೆ ಬಿದ್ದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿದು ರಸ್ತೆಗಳು ಹದಗೆಟ್ಟ ಪರಿಣಾಮವಾಗಿ ರಸ್ತೆಗಳು ಹಾಳಾಗಿವೆ. ಕೊರೊನಾ ಹೊಡೆತದಿಂದ ಹಣಕಾಸಿನ ತೊಂದರೆ ಉಂಟಾಗಿದ್ದರಿಂದ ಸದ್ಯ ತಾಲೂಕಿನಲ್ಲಿ ಕಬ್ಬು ಕಟಾವು ಪ್ರಾರಂಭವಾಗಿದ್ದು, ರಸ್ತೆಗಳನ್ನು ತಾತ್ಕಾಲಿಕ ರಿಪೇರಿ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರ ವಿಶೇಷ ಕಾಳಜಿಯಿಂದ ಅಥಣಿಗೆ ಹೆಚ್ಚಿನ ಅನುದಾನ ತರಲಾಗುವುದು ಎಂದರು.
ಹಂತ ಹಂತವಾಗಿ ರಸ್ತೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಜನವಾಡ ರಸ್ತೆ ಕಾಮಗಾರಿಗೆ ಸದ್ಯದಲ್ಲೇ ಅನುಮೋದನೆ ದೊರೆಯುವುದರಿಂದ ಕಾಮಗಾರಿ ಪ್ರಾರಂಭ ಮಾಡಲಾಗುವುದು ಮತ್ತು ಸುಟ್ಟಟ್ಟಿ ಯಲ್ಲಮವಾಡಿ ರಸ್ತೆ ರಿಪೇರಿ ಮಾಡಲಾಗುವುದು ಎಂದು ತಿಳಿಸಿದರು.