ಬೆಳಗಾವಿ: ಜಾತಿಗಣತಿ ವರದಿ ಆಚೆ ಬಂದ ಮೇಲೆ ಸರಿಯಾಗಿಲ್ಲ ಅಂತ ಹೇಳಲಿ. ಸಮೀಕ್ಷೆಯನ್ನೇ ನೋಡದೇ ಅದರ ಟೀಕೆ ಮಾಡುವುದು ಸರಿಯಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಾವ ಸಮುದಾಯ ಹೆಚ್ಚಿದೆ, ಯಾವ ಸಮುದಾಯ ಕಡಿಮೆ ಇದೆ, ಯಾವ ಸಮುದಾಯ ಹಿಂದುಳಿದಿದೆ ಎಂದು ತಿಳಿದುಕೊಳ್ಳಲು 168 ಕೋಟಿ ನೀಡಿ ಖರ್ಚು ಮಾಡಿ ಜಾತಿ ಗಣತಿ ವರದಿ ಸಿದ್ಧ ಪಡಿಸಲಾಗಿದೆ. ವರದಿಯನ್ನು ಸರ್ಕಾರಕ್ಕೆ ಕೊಡಬೇಕು. ವರದಿ ಸಲ್ಲಿಕೆಯಾದ ಬಳಿಕ ಅದರಲ್ಲಿ ಏನಿದೆ ಎಂಬುದು ಗೊತ್ತಾಗುತ್ತೆ. ವರದಿ ಆಧರಿಸಿ ನಾವು ಕಾರ್ಯಕ್ರಮ ರೂಪಿಸಬೇಕಾಗುತ್ತದೆ ಎಂದರು.
ಮನಮೋಹನ್ ಸಿಂಗ್ ಪ್ರಧಾನಿ ಇದ್ದಾಗ ರಾಜೇಂದ್ರ ಸಾಚಾರ್ ಕಮಿಷನ್ ಮಾಡಿ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಸಮೀಕ್ಷೆ ಮಾಡಲಾಗಿತ್ತು. ಅದರ ಆಧಾರದಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು. ಅದೇ ಪ್ರಕಾರ ರಾಜ್ಯದಲ್ಲಿ ಸಮೀಕ್ಷೆ ಮಾಡಿ ಯಾವ ಸಮುದಾಯ ಹಿಂದುಳಿದಿದೆ?. ಯಾವ ಸಮುದಾಯ ಶೋಷಿತ ವರ್ಗಕ್ಕೆ ಸೇರುತ್ತದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ. ಆ ಸಮೀಕ್ಷೆ ಬೇಡ ಅಂದರೆ ಅದಕ್ಕೆ ಅರ್ಥ ಇಲ್ಲ. ವರದಿ ಸರಿಯಾಗಿ ಸರಿ ಇಲ್ಲ ಎಂದು ಯಾರು ಹೇಳಿದ್ದಾರೆ? ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತರ ಓಲೈಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ನಮ್ಮ ಸರ್ಕಾರ ರೈತರ ಪರ, ಕಾರ್ಮಿಕರ, ವಿದ್ಯಾರ್ಥಿಗಳ ಪರವಾಗಿದೆ. ಮುಸ್ಲಿಂಮರಿಗೆ ಹಣ ಕೊಡುತ್ತೇವೆ ಎಂದರೆ ಅವರು ಸಮಾಜದ ಭಾಗವಲ್ಲವಾ?. 16% ಮುಸ್ಲಿಮರು ಇದ್ದಾರೆ. ಅವರು ಕರ್ನಾಟಕದ ಜನ ಸಮುದಾಯವಲ್ಲವಾ?. ಅದೇ ಪ್ರಕಾರ ಎಸ್ಸಿ ಎಸ್ಟಿ ಅಭಿವೃದ್ಧಿ ಮಾಡಬಾರದಾ?. ಅದರ ವಿರುದ್ಧ ಬಿಜೆಪಿಯವರು ಇದ್ದಾರೆ ಅನ್ನೋದನ್ನು ತೋರಿಸುತ್ತಿದ್ದಾರೆ. ಒಡೆದು ಆಳುವ ನೀತಿ ನಮ್ಮದಲ್ಲ. ಬಿಜೆಪಿಗೆ ಸರ್ವಜನಾಂಗದ ಶಾಂತಿಯ ತೋಟ ಎಂಬ ಬಗ್ಗೆ ನಂಬಿಕೆ ಇಲ್ಲ ಎಂದರು.