ಬೆಳಗಾವಿ :ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಖನಿಜ ರಕ್ಷಣಾ ಪಡೆ ಸ್ಥಾಪನೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಇಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಚಾಲನೆ ಕೊಟ್ಟರು. ರಾಜ್ಯದ ಖನಿಜ ಸಂಪತ್ತು ಸಂರಕ್ಷಿಸಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಸಚಿವರು ಹೇಳಿದರು.
ರಾಜ್ಯದ ಖನಿಜ ಸಂಪತ್ತು ಸಂರಕ್ಷಿಸುವ 'ಖನಿಜ ರಕ್ಷಣಾ ಪಡೆ'ಗೆ ಚಾಲನೆ
ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಖನಿಜ ಸಂಪತ್ತು ಸಂರಕ್ಷಣೆ ಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಖನಿಜ ರಕ್ಷಣಾ ಪಡೆ ಸ್ಥಾಪಿಸಿ ಆದಾಯ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿ ಖನಿಜ ರಕ್ಷಣಾ ಪಡೆ ಸ್ಥಾಪಿಸಲಾಗುತ್ತಿದೆ. ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಂತೆ ಪೋಲೀಸ್ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಖನಿಜ ಮತ್ತು ಉಪಖನಿಜಗಳ ಅನಧಿಕೃತ ಗಣಿಗಾರಿಕೆ, ದಾಸ್ತಾನು ಮತ್ತು ಸಾಗಾಣಿಕೆ ವಿರುದ್ದ ಕ್ರಮಕೈಗೊಳ್ಳಲು ಅಧಿಕಾರ ಪ್ರತ್ಯೋಜಿಸಲಾಗಿದೆ. ಆದಾಗ್ಯೂ ಇಲಾಖೆಗಳಿಂದ ಅಕ್ರಮ ಖನಿಜ ಮತ್ತು ಉಪಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಗಟ್ಟುವ ಕ್ರಮಗಳು ಹೆಚ್ಚು ಪರಿಣಾಮಕಾರಿಯಾಗಿಲ್ಲ. ಆದ್ದರಿಂದ, 2020ರ ಏಪ್ರಿಲ್ 30 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧೀನದಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಖನಿಜ ರಕ್ಷಣಾ ಪಡೆ ರಚಿಸಲು ಅನುಮೋದನೆ ನೀಡಲಾಗಿತ್ತು. ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಖನಿಜ ರಕ್ಷಣಾ ಪಡೆ ಅನುಷ್ಠಾನ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು
ಮೊದಲ ಹಂತದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು, ಹಾವೇರಿ, ಬೆಳಗಾವಿ, ಕಲಬುರಗಿ, ಕೊಪ್ಪಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖನಿಜ ರಕ್ಷಣಾ ಪಡೆ ಸ್ಥಾಪಿಸಲು ಕ್ರಮವಹಿಸಲಾಗಿದೆ. ಪ್ರತಿ ಜಿಲ್ಲೆಗೆ ಹವಾಲ್ದಾರ್ ದರ್ಜೆಯ 3 ನಿವೃತ್ತ ಸೈನಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ 44 ಹೊಸ ವಾಹನ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.