ಬೆಳಗಾವಿ: ಸರ್ಕಾರಿ ದಾಖಲಾತಿ ಪತ್ರವನ್ನು ಮರಾಠಿ ಭಾಷೆಯಲ್ಲಿ ನೀಡಬೇಕೆಂದು ಒತ್ತಾಯಿಸಿ ಎಂಇಎಸ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಇದಕ್ಕೂ ಮುನ್ನ ನಗರದ ಸರ್ದಾರ್ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ನಾಡದ್ರೋಹಿ ಘೋಷಣೆ ಕೂಗಿ ಪುಂಡಾಟ ಪ್ರದರ್ಶಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಎಂಇಎಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು. ಈ ವೇಳೆ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ಮೆರವಣಿಗೆಯುದ್ದಕ್ಕೂ ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿದರು. ಮೆರವಣಿಗೆ ಆರಂಭಕ್ಕೂ ಮುನ್ನ ಪೊಲೀಸರ ಜೊತೆಗೂ ಇವರು ವಾಗ್ವಾದ ನಡೆಸಿದರು.
ಈ ವೇಳೆ ಮಾತನಾಡಿದ ಎಂಇಎಸ್ ಮುಖಂಡ ಮನೋಹರ ಕಿಣೇಕರ್, ಬೆಳಗಾವಿಯಲ್ಲಿ ಮರಾಠಿಗರ ಸಂಖ್ಯೆ ಅಧಿಕವಾಗಿರುವಾಗ ಕರ್ನಾಟಕ ಸರ್ಕಾರ ಸ್ಥಳೀಯ ಭಾಷೆಗೆ ಆದ್ಯತೆ ಕೊಡುವ ಅಗತ್ಯವಿದೆ. ಆದ್ದರಿಂದ, ಸರ್ಕಾರದ ದಾಖಲಾತಿಯ ಕಾಗದ ಪತ್ರಗಳನ್ನು ಮರಾಠಿ ಭಾಷೆಯಲ್ಲಿ ನೀಡಬೇಕು. ನಗರದ ಪ್ರಮುಖ ವೃತ್ತಗಳಲ್ಲಿ ಮರಾಠಿ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕೆಂದು ಆಗ್ರಹಿಸಿದರು.