ಬೆಳಗಾವಿ:ನಾಡದ್ರೋಹಿ ಎಂಇಎಸ್(ಮಹಾರಾಷ್ಟ್ರ ಏಕೀಕರಣ ಸಮಿತಿ)ನಿಂದ ಮತ್ತೆ ಗಡಿ ಕ್ಯಾತೆ ಆರಂಭವಾಗಿದೆ. ನ.1ರಂದು ಕರಾಳ ದಿನಾಚರಣೆಗೆ ಸಿದ್ಧತೆ ನಡೆಯುತ್ತಿದೆ.
ನ.1ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಕುಂದಾನಗರಿ ಬೆಳಗಾವಿಯಲ್ಲೂ ಅದ್ಧೂರಿಯಾಗಿಯೇ ಕಾರ್ಯಕ್ರಮಗಳು ನಡೆಯುತ್ತವೆ. ರಾಜ್ಯದ ಮೂಲೆ ಮೂಲೆಗಳಿಂದಲೂ ರಾಜ್ಯೋತ್ಸವ ಸಂಭ್ರಮ ನೋಡಲು ಜನರು ಜಿಲ್ಲೆಗೆ ಆಗಮಿಸುತ್ತಾರೆ. ಈ ದಿನದಂದೇ ಕರಾಳ ದಿನಾಚರಣೆ ಆಚರಣೆಗೆ ಎಂಇಎಸ್ ಮುಂದಾಗಿದೆ.
ಡಿಸೆಂಬರ್ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನದ ಮೊದಲ ದಿನವೇ ಮಹಾಮೇಳಾವ್ ಮಾಡಲು ಉದ್ದೇಶಿಸಲಾಗಿದೆ ಎನ್ನಲಾಗಿದೆ. ಅಧಿವೇಶನದ ಸಂದರ್ಭದಲ್ಲಿ ಗಡಿ ಕ್ಯಾತೆ ತೆಗೆಯುವುದು ಎಂಇಎಸ್ ಪ್ಲ್ಯಾನ್. ಚುನಾವಣಾ ವರ್ಷವೂ ಆಗಿದ್ದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹುನ್ನಾರ ಇದರಲ್ಲಿದೆ. ಎಂಇಎಸ್‌ನ ಮಾಜಿ ಶಾಸಕ ಮನೋಹರ ಕಿಣೇಕರ ನೇತೃತ್ವದಲ್ಲಿ ಸಭೆ ನಡೆಸಿ, ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಪ್ರತೀ ವರ್ಷ ರಾಜ್ಯೋತ್ಸವ, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಎಂಇಎಸ್ ಪುಂಡಾಟ ಪ್ರದರ್ಶನ ಮಾಡುತ್ತಿದ್ದರೂ, ಸರ್ಕಾರ ಯಾಕೆ ಸಂಘಟನೆಯನ್ನು ನಿಷೇಧಿಸುತ್ತಿಲ್ಲ ಎಂದು ಕನ್ನಡಿಗರು ಪ್ರಶ್ನಿಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಎಂಇಎಸ್ ಕರಾಳ ದಿನಾಚರಣೆ, ಮಹಾಮೇಳಾವ್ ನಡೆಸುತ್ತಿದ್ದಾರೆ. ಆದರೆ ಯಾವುದೇ ಸರ್ಕಾರ ಈವರೆಗೆ ಕಡಿವಾಣ ಹಾಕಿಲ್ಲ.
ಇದನ್ನೂ ಓದಿ:ಕಪ್ಪು ರಿಬ್ಬನ್ ಧರಿಸಿ ಕರಾಳ ದಿನಾಚರಣೆ ಬೆಂಬಲಿಸಿದ ಮಹಾ ನಾಯಕರು