ಮಹದಾಯಿ ಯೋಜನೆ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪ್ರಾರಂಭಿಸಿ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಎಂದ ಕರಿಬೇಡಿ ಬೆಳಗಾವಿ :ಒಂದು ತಿಂಗಳಲ್ಲಿ ಮಹದಾಯಿ ಯೋಜನೆ ಕಾಮಗಾರಿ ಪ್ರಾರಂಭಿಸಿ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಎಂದು ಕರಿಯಬೇಡಿ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ನಾಯಕಿಯರಿಗೆ ಸವಾಲು ಹಾಕಿದ್ದಾರೆ.
ಬೆಳಗಾವಿ ನಗರದಲ್ಲಿಂದು ಭಾರತೀಯ ಜನತಾ ಪಾರ್ಟಿ ಪಕ್ಷದ ಬೂತ್ ವಿಜಯ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಹಾಳು ಮಾಡಿರುವುದು ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದರು. ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಮಹದಾಯಿ ಯೋಜನೆಗೆ ಚಾಲನೆ ನೀಡಲಿಲ್ಲ. ದಶಕಗಳ ಹೋರಾಟವಾದರು ಕಾಂಗ್ರೆಸ್‌ನವರು ಬಾಯಲ್ಲಿ ಕಡುಬು ಇಟ್ಟುಕೊಂಡಿದ್ದರಾ? ಯಾಕೆ ಯೋಜನೆಗೆ ಚಾಲನೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಈಗ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರು ಕೇಂದ್ರ ಸರ್ಕಾರ ಡಿಪಿಆರ್ ಮಾಡಿರುವುದು ಸುಳ್ಳು ಅಂತಾರೆ. ಆದೇಶ ಪ್ರತಿಯನ್ನು ನೋಡಿ ಎಂದು ಮಹದಾಯಿ ಯೋಜನೆ ಕೇಂದ್ರ ಸರ್ಕಾರದ ಆದೇಶ ಪ್ರತಿ ಪ್ರದರ್ಶಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು. ಹೆಚ್.ಕೆ.ಪಾಟೀಲ್ ಡೇಟ್ ಇಲ್ಲದ ಸುಳ್ಳು ಕಾಗದ ನೀಡಿದ್ದಾರೆ. 2022ರ ಡಿಸೆಂಬರ್ 29ರಂದು ಜಲಸಂಪನ್ಮೂಲ ಇಲಾಖೆ ನಿರ್ದೇಶಕರು ಸಹಿ ಮಾಡಿದ ಕೇಂದ್ರದ ಆದೇಶ ಇದೆ. ನಾವು ಮೋಸ ಮಾಡುವ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್‌ನವರು ಮೋಸ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
2007ರ ಮಾರ್ಚ್ 23ರಂದು ಗೋವಾದಲ್ಲಿ ಸೋನಿಯಾ ಗಾಂಧಿ ಭಾಷಣ ಮಾಡಿವ ವೇಳೆ ಕರ್ನಾಟಕಕ್ಕೆ ಒಂದು ಹನಿ ಮಹದಾಯಿ ನೀರು ನೀಡಲ್ಲ ಎಂದಿದ್ದರು. ಅದಕ್ಕೆ ನಿಮ್ಮ ಉತ್ತರ ಏನು? ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಡಿಪಿಆರ್ ಕ್ಲಿಯರ್ ಮಾಡಿಕೊಡಲು ಕಾಂಗ್ರೆಸ್ ಹೇಳಬೇಕಿತ್ತು. ಆದರೆ 2002ರಲ್ಲಿ ಮಹದಾಯಿ ಯೋಜನೆಗೆ ಅನುಮತಿ ಪಡೆದಿದ್ವಿ, ಬಿಜೆಪಿ ಸರ್ಕಾರ ನಿಲ್ಲಿಸಿತು ಅಂತಾ ಆರೋಪಿಸುತ್ತಾರೆ.
2004 ರಿಂದ 2014ರವರೆಗೆ ಮನಮೋಹನ್ ಸಿಂಗ್ ಪ್ರಧಾನಿ ಇದ್ರು. ಆಗ 10 ವರ್ಷ ನೀವು ಏನ್ ಮಾಡಿದ್ರಿ? ತಡೆಯಾಜ್ಞೆ ಇದ್ರೆ ತಡೆಯಾಜ್ಞೆ ತೆರವುಗೊಳಿಸಬೇಕಿತ್ತು. 2010ರಲ್ಲಿ ನ್ಯಾ.ಪಾಂಚಾಲ್ ನೇತೃತ್ವದ ಮಹದಾಯಿ ಟ್ರಿಬ್ಯುನಲ್ ನಿಷ್ಕ್ರಿಯ ಆಗಿತ್ತು. ಸಿದ್ದರಾಮಯ್ಯ ಸರ್ಕಾರ ಇದ್ದಾಗ 1080 ಜನ ಮಹದಾಯಿಗಾಗಿ ಹೋರಾಟ ಮಾಡಿದರು, ಆಗ ಅವರನ್ನು ಜೈಲಿಗೆ ಹಾಕಿದ್ದಿರಿ. ಇದು ನೀವು ಮಾಡಿದ ದ್ರೋಹ. ಇದಕ್ಕೆ ಕಾಂಗ್ರೆಸ್ ನವರು ಮೊದಲು ಕ್ಷಮೆಯಾಚನೆ ಮಾಡಿ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಕಾರಜೋಳ ಹರಿಹಾಯ್ದರು.
2014ಕ್ಕೆ ಮೋದಿ ಸರ್ಕಾರ ಬಂದ ಮೇಲೆ ಮಹದಾಯಿ ನ್ಯಾಯಾಧಿಕರಣ ಸಶಕ್ತಗೊಳಿಸಿತು ಅದಕ್ಕೆ ಬೇಕಾದ ಮೂಲಸೌಕರ್ಯವನ್ನು ಕಲ್ಪಿಸಲಾಯಿತು. ಕಳಸಾ ಬಂಡೂರಿಯಲ್ಲಿ ಒಟ್ಟಾರೆ ನಮಗೆ 3.9 ಟಿಎಂಸಿ ನೀರು ಕೊಟ್ಟಿದ್ದು ಇತಿಹಾಸ ಎಂದರು. ಇಂದು ನರೇಂದ್ರ ಮೋದಿ ಸರ್ಕಾರ ಡಿಪಿಆರ್ ಅನುಮೋದನೆ ನೀಡಿದೆ. ಇದು ಸುಳ್ಳು ದಾಖಲೆ ಎಂದು ಜನರಿಗೆ ಮೋಸ ಮಾಡಲು ಕಾಂಗ್ರೆಸ್‌ನವರು ಯತ್ನ ಮಾಡುತ್ತಿದ್ದಾರೆ. ಒಂದು ತಿಂಗಳೊಳಗೆ ಕಳಸಾ ಬಂಡೂರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿ, ಒಂದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿಯೇ ಸಿದ್ಧ ಎಂದು ಸಚಿವರು ಇದೇ ಸಂದರ್ಭದಲ್ಲಿ ವಾಗ್ದಾನ ಮಾಡಿದರು.
ಇದೆ ವೇಳೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬೆಳಗಾವಿ ಹಾಗೂ ರಾಜ್ಯಕ್ಕೆ ಹಲವು ನೀರಾವರಿ ಯೋಜನೆಗಳನ್ನು ಕಲ್ಪಿಸಿ ಜನಪರ ಸರ್ಕಾರ ಎಂದು ಬಿಂಬಿತವಾಗಿದೆ. ಕಳೆದ ರಾಜ್ಯ ಸಚಿವ ಸಂಪುಟದಲ್ಲಿ ಬೆಳಗಾವಿ ಜಿಲ್ಲೆಗೆ ಮಾತ್ರ 5700ಕೋಟಿ ರೂಪಾಯಿ ಅನುದಾನದಲ್ಲಿ ಹಲವು ನೀರಾವರಿ ಯೋಜನೆ ಪ್ರಾರಂಭಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಚನ್ನಬಸವಣ್ಣ ಏತ ನೀರಾವರಿ ಯೋಜನೆ. ಮಹಾಲಕ್ಷ್ಮಿ ಏತ ನೀರಾವರಿ. ಸತ್ತಿಗೇರಿ ಏತ ನೀರಾವರಿ ಯೋಜನೆ. ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ. ಕರಗಾಂವ್ ಏತ ನೀರಾವರಿ ಯೋಜನೆ. ಒಟ್ಟು ಐದು ಬೃಹತ್ ನೀರಾವರಿ ಯೋಜನೆ ಪ್ರಾರಂಭಕ್ಕೆ ಸರ್ಕಾರ ಚಾಲನೆ ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ :ಮಹದಾಯಿ ವಿಚಾರದಲ್ಲಿ ಬಿಜೆಪಿಯಿಂದ ಮೂಗಿಗೆ ತುಪ್ಪ ಸವರುವ ಕೆಲಸ: ಹೆಚ್.ಕೆ.ಪಾಟೀಲ್