ಬೆಳಗಾವಿ :ಕೊರೊನಾ ಸೋಂಕು ತಗಲುವ ಭಯದಿಂದ ಶೇ.85ರಷ್ಟು ಪ್ರಯಾಣಿಕರು ವಿಮಾನ ಪ್ರಯಾಣದಿಂದ ದೂರ ಉಳಿದಿದ್ದಾರೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಸಾಂಬ್ರಾ ವಿಮಾನ ನಿಲ್ದಾಣದ ಮೂಲಕ ನಿತ್ಯ 1300 ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ಆಗುತ್ತಿತ್ತು. ಇದೀಗ ಈ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ವಿಮಾನ ನಿಲ್ದಾಣ ಬಿಕೋ ಎನ್ನಲಾರಂಭಿಸಿದೆ.
ಕೊರೊನಾ ಭೀತಿಯಿಂದಾಗಿ ಕೇಂದ್ರ ಸರ್ಕಾರ ದೇಶದಲ್ಲೇ ಮೊದಲ ಸಲ ದೇಶಿಯ ವಿಮಾನ ಹಾರಾಟ ಸ್ಥಗಿತಗೊಳಿಸಿತ್ತು. ದೇಶದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾರ್ಚ್ 24 ರಿಂದ ಮೇ 25ರವರೆಗೆ ದೇಶದಲ್ಲಿ ಬಿಗಿಯಾದ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ದೇಶದಲ್ಲಿ ದೇಶಿಯ ವಿಮಾನಗಳ ಹಾರಾಟವೂ ನಿಂತಿತ್ತು. ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸೇವೆ ಆರಂಭವಾಗಿದ್ದರೂ ವರ್ಷಾರಂಭದಲ್ಲಿದ್ದ ಪ್ರಯಾಣಿಕರ ಉತ್ಸಾಹ ಇದೀಗ ಇಲ್ಲದಂತಾಗಿದೆ. ಇದರಿಂದ ವಿಮಾನಯಾನ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಂತಾಗಿದೆ.
ಕೊರೊನಾ ಕಂಟಕ :ಸಾಂಬ್ರಾ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿದ ಬಳಿಕ ಹಾಗೂ ಉಡಾನ್-3 ವ್ಯಾಪ್ತಿಗೆ ಒಳಪಟ್ಟ ನಂತರ ವಿಮಾನಗಳ ಸಂಖ್ಯೆ ಹೆಚ್ಚಾದಂತೆ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ವರ್ಷಾರಂಭದಲ್ಲಿ ಸಾಂಬ್ರಾ ವಿಮಾನ ನಿಲ್ದಾಣದಿಂದ ನಿತ್ಯ 28 ವಿಮಾನಗಳ ಆಗಮನ-ನಿರ್ಗಮನವಾಗುತ್ತಿತ್ತು. ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಏರ್ಲೈನ್ಸ್, ಸ್ಪೈಸ್ ಜೆಟ್, ಟ್ರು ಜೆಟ್, ಸ್ಟಾರ್ ಏರ್ಲೈನ್ಸ್ ಸೇರಿ ಇನ್ನಿತರ ವಿಮಾನಗಳು ಸಾಂಬ್ರಾ ಮಿಲ್ದಾಣದ ಮೂಲಕ ಸೇವೆ ನೀಡುವ ಜೊತೆಗೆ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದವು.
ಇದೀಗ ನಿತ್ಯ 12 ವಿಮಾನಗಳ ಆಗಮನ-ನಿರ್ಗಮನವಾಗುತ್ತಿದೆ. 200 ರಿಂದ 300 ಪ್ರಯಾಣಿಕರು ಮಾತ್ರ ಪ್ರಯಾಣಿಸುತ್ತಿದ್ದಾರೆ. ಸದ್ಯ ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಹೈದ್ರಾಬಾದ್, ಇಂದೋರ್, ಅಹ್ಮದಾಬಾದ್, ಬೆಂಗಳೂರು, ಮುಂಬೈ ಹಾಗೂ ಮೈಸೂರನ್ನು ಸಂಪರ್ಕಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾದ ಹಿನ್ನೆಲೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ್ ಮೌರ್ಯ, ಕೊರೊನಾ ಭೀತಿಯಿಂದಾಗಿ ಪ್ರಯಾಣಿಕರ ಸಂಖ್ಯೆ ಶೇ. 85ರಷ್ಟು ಇಳಿಮುಖವಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲು ಇನ್ನೂ ಸಮಯಾವಕಾಶ ಬೇಕು ಎಂದರು.