ಅಥಣಿ: ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಆಗಮಿಸಿದ್ದು, ಅವರಿಗೆ ನಾನು ಸ್ವಾಗತ ಕೋರುತ್ತೇನೆ, ಅವರು ಕಾಲು ಇಟ್ಟಲೆಲ್ಲ ಬಿಜೆಪಿಯ ಕಮಲ ಅರಳುತ್ತದೆ. ಹಾಗಾಗಿ ನಾನು ಅವರನ್ನ ಸ್ವಾಗತ ಬಯಸುತ್ತೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಲಕ್ಷ್ಮಣ್ ಸವದಿ ಕೈ ಮುಖಂಡರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ನೂತನವಾಗಿ ಪೊಲೀಸ್ ಠಾಣಾ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್ ಪಕ್ಷದವರು ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ, ಭಾರತ ಎಲ್ಲಿ ಒಡೆದಿದೆ ಎಂದು ಇವರು ಜೋಡೋ ಕಾರ್ಯಕ್ರಮ ಮಾಡುತ್ತಿದ್ದಾರೆ.
ಭಾರತ ಜೋಡೋ ಎಂಬುವುದು ಡಿಕೆ ಶಿವಕುಮಾರ್, ಸಿದ್ದರಾಮಯ್ಯರನ್ನ ಒಟ್ಟುಗೂಡಿಸಲಿಕ್ಕೆ ಮಾಡುತ್ತಿರುವ ಯಾತ್ರೆ ಎಂದು ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು. ಭಾರತದಲ್ಲಿ ಜಮ್ಮು ಕಾಶ್ಮೀರವನ್ನು ಹೊರಗಿಟ್ಟು ಭಾರತ ಒಡೆದಿದ್ದು ಕಾಂಗ್ರೆಸ್ನವರು. ಆದರೆ, ಜಮ್ಮು ಕಾಶ್ಮೀರದ 370ನೇ ವಿಧಿ ರದ್ದು ಮಾಡಿ ಭಾರತ ಜೋಡಣೆ ಮಾಡಿದ್ದು ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಸವದಿ ಪ್ರತಿಪಾದಿಸಿದರು.
ಅಂದಿನ ಗುಜರಾತ್ನ ಗೃಹ ಸಚಿವರಾದ ಸರ್ದಾರ್ ವಲ್ಲಭ್ಭಾಯಿ ಪಟೇಲ್ ಅವರು ರಾಜನೀತಿಯನ್ನು ರದ್ದು ಮಾಡಿ ಅಖಂಡ ಭಾರತ ನಿರ್ಮಾಣ ಮಾಡಿದ್ದು ಇತಿಹಾಸ. ಆದರೆ, ಕಾಂಗ್ರೆಸ್ ನವರು ಏನು ಜೋಡಣೆ ಮಾಡುತ್ತಿದ್ದಾರೆ ಎಂದು ಸವದಿ ಕೈ ಪಕ್ಷದ ವಿರುದ್ಧ ಹರಿಹಾಯ್ದಾದರು.