ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಲ್ಲಿ ಕಮಲ ಅರಳಿಸಿದ್ರೆ ಡಿಸಿಎಂ ಸವದಿ ಹೈಕಮಾಂಡ್‍ಗೆ ಇನ್ನೂ ಹತ್ತಿರ! - ಬಿಜೆಪಿ ಪಕ್ಷದ ಚುನಾವಣೆ ಸಹ ಉಸ್ತುವಾರಿ

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಹೈಕಮಾಂಡ್ ನಾಯಕರ ಮನಗೆಲ್ಲಲು ಇರುವ ಬೆಸ್ಟ್ ಚಾನ್ಸ್ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಡಿಸಿಎಂ ಸವದಿ

By

Published : Oct 16, 2019, 8:39 PM IST

ಬೆಳಗಾವಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಕಮಲ ಅರಳಿದರೆ ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿ ಡಿಸಿಎಂ ಪಟ್ಟಕ್ಕೇರಿ ಅಚ್ಚರಿ ಮೂಡಿಸಿದ್ದರು. ಇದೀಗ ಮಹಾರಾಷ್ಟ್ರ ರಾಜ್ಯದ ಬಿಜೆಪಿಯ ಚುನಾವಣೆ ಸಹ ಉಸ್ತುವಾರಿ ಆಗಿರುವ ಲಕ್ಷ್ಮಣ ಸವದಿ ನಿತ್ಯ ಕನಿಷ್ಠ 8-10 ವಿಧಾನಸಭೆ ಕ್ಷೇತ್ರಗಳಲ್ಲಿ ಓಡಾಡಿ ಮತಬೇಟೆ ನಡೆಸುತ್ತಿದ್ದಾರೆ. ಆ ಮೂಲಕ ಬಿಜೆಪಿ ಪಕ್ಷವನ್ನು ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಲು ಲಕ್ಷ್ಮಣ ಸವದಿ ಹಗಳಿರಲು ಶ್ರಮಿಸುತ್ತಿದ್ದಾರೆ.

ಮಹಾರಾಷ್ಟ್ರದ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ: ಚುನಾವಣಾ ಪ್ರಚಾರಕ್ಕೆ ಕರ್ನಾಟಕ ಸಿಎಂ!

ಪ್ರಬಲ ಲಿಂಗಾಯತ ನಾಯಕರಾಗಿರುವ ಲಕ್ಷ್ಮಣ ಸವದಿ ಕನ್ನಡದಷ್ಟೇ ಮರಾಠಿ ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ. ಮಹಾರಾಷ್ಟ್ರದ 288 ವಿಧಾನಸಭೆ ಕ್ಷೇತ್ರಗಳ ಪೈಕಿ 50 ವಿಧಾನಸಭೆ ಕ್ಷೇತ್ರಗಳಲ್ಲಿ ಲಿಂಗಾಯತ ಹಾಗೂ ಕನ್ನಡ ಭಾಷಿಕರೆ ನಿರ್ಣಾಯಕರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗು ಮುನ್ನವೆ ಮಹಾರಾಷ್ಟ್ರ ಬಿಜೆಪಿ ಪಕ್ಷದ ಚುನಾವಣೆ ಸಹ ಉಸ್ತುವಾರಿ ಆಗಿದ್ದ ಲಕ್ಷ್ಮಣ ಸವದಿ ಅವರಿಗೆ ಶಾಸಕರಲ್ಲದಿದ್ದರೂ ಬಿಜೆಪಿ ಹೈಕಮಾಂಡ್ ಮಹಾ ಚುನಾವಣೆಯ ದೃಷ್ಠಿಯಿಂದಲೇ ಡಿಸಿಎಂ ಪಟ್ಟ ಕರುಣಿಸಿತ್ತು.

ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮಹಾರಾಷ್ಟ್ರದಲ್ಲೇ ಠಿಕಾಣಿ ಹೂಡಿರುವ ಸವದಿ ಲಿಂಗಾಯತ ಹಾಗೂ ಕನ್ನಡ ಭಾಷಿಕರ ಮತದಾರರು ಅಧಿಕ ಇರುವ ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಪುಣೆ ಹಾಗೂ ಮುಂಬೈ ನಗರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದಾರೆ. ಅಲ್ಲದೇ ಈ 50 ಕ್ಷೇತ್ರಗಳಿಗೆ ರಾಜ್ಯದ ಜನಪ್ರೀಯ ಲಿಂಗಾಯತ ನಾಯಕರನ್ನು ಆಹ್ವಾನಿಸಿ ಚುನಾವಣೆ ಪ್ರಚಾರ ಸಭೆ ಏರ್ಪಡಿಸುತ್ತಿದ್ದಾರೆ. ಕನ್ನಡ ಭಾಷಿಕರು, ಲಿಂಗಾಯತರು ನಿರ್ಣಾಯಕರಾಗಿರುವ ಮಹಾರಾಷ್ಟ್ರದ 50 ವಿಧಾನಸಭೆ ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಲು ಲಕ್ಷ್ಮಣ ಸವದಿ ಹಲವು ತಂತ್ರ ಹೆಣೆಯುತ್ತಿದ್ದಾರೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಹಲವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಹೈಕಮಾಂಡ್ ಮನಗೆಲ್ಲಲು ಸವದಿಗೆ ಬೆಸ್ಟ್ ಚಾನ್ಸ್:
ಲಿಂಗಾಯತ ನಾಯಕನಾಗಿ ಹೊರಹೊಮ್ಮಿರುವ ಲಕ್ಷ್ಮಣ ಸವದಿ ಅವರನ್ನು ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಸವದಿಗೆ, ಬಿಜೆಪಿ ನಾಯಕರು ರೈತ ಮೋರ್ಚಾ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಬಳಿಕ ಮಹಾರಾಷ್ಟ್ರದ ಬಿಜೆಪಿಯ ಚುನಾವಣೆ ಸಹ ಉಸ್ತುವಾರಿ ಜವಾಬ್ದಾರಿ ನೀಡಿ ಈಗ ಡಿಸಿಎಂ ಪಟ್ಟ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮಿತ್ರಪಕ್ಷಗಳು, ಈ ಚುನಾವಣೆಯಲ್ಲಿ ಬಹುಮತ ಸಾಧಿಸಿದ್ರೆ ಬಿಜೆಪಿ ಹೈಕಮಾಂಡ್ ಲಕ್ಷ್ಮಣ ಸವದಿ ಅವರಿಗೆ ಮತ್ತಷ್ಟು ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಹೈಕಮಾಂಡ್ ನಾಯಕರ ಮನಗೆಲ್ಲಲು ಇರುವ ಬೆಸ್ಟ್ ಚಾನ್ಸ್ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ABOUT THE AUTHOR

...view details