ಬೆಳಗಾವಿ:ವಿಧಾನಸಭೆ ಚುನಾವಣೆ ಹಿನ್ನೆಲೆ ಇದೇ ತಿಂಗಳು 30 ರಂದು ಕಾಂಗ್ರೆಸ್ ಮುಖಂಡರ ಯಾತ್ರೆ ಶುರುವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖಂಡರು ಕೈಗೊಳ್ಳುವ ಯಾತ್ರೆ, ಕೃಷ್ಣಾ, ಮಹದಾಯಿ ಯೋಜನೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆ ಹಮ್ಮಿಕೊಂಡಿರುವ ಸಮಾವೇಶ ಕುರಿತು ಕಾಂಗ್ರೆಸ್ ನಾಯಕರು ಪೂರ್ವಭಾವಿ ಸಭೆ ನಡೆಸಿದರು. ನಂತರ ಈ ಬಗ್ಗೆ ಮಾತನಾಡಿದ ಅವರು, ಅಂದು ವಿಜಯಪುರದಲ್ಲಿ ಕೃಷ್ಣಾ ನೀರು ಹಂಚಿಕೆ ವಿಚಾರವಾಗಿ, ಮುಂದಿನ ತಿಂಗಳು 2 ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಯೋಜನೆ ವಿಚಾರವಾಗಿ ಹೋರಾಟ ಹಮ್ಮಿಕೊಂಡಿದ್ದೇವೆ. ಜ. 8 ರಂದು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮಾವೇಶವನ್ನು ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ಬಸ್ ಯಾತ್ರೆ..ಬೆಳಗಾವಿಯಿಂದ ನಮ್ಮ ನಾಯಕರೆಲ್ಲರೂ ಸೇರಿ ಜ. 11 ರಂದು ಬಸ್ ಯಾತ್ರೆ ಆರಂಭಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಗಾಂಧೀಜಿ ಅವರು ಇಲ್ಲಿ ಎಐಸಿಸಿ ಸಭೆ ಮಾಡಿದ್ದರು. ಈ ಜಾಗದಲ್ಲಿ ಒಂದು ಇತಿಹಾಸವಿದೆ. ರಾಜ್ಯದಲ್ಲಿ ಜನಪರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಬೆಳಗಾವಿಗೆ ಜ.10 ರಂದು ಆಗಮಿಸಿ 11 ರಿಂದ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಸಭೆ ಮಾಡಲಿದ್ದೇವೆ. ಜಿಲ್ಲೆ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಮಾಡುತ್ತಿದ್ದೇವೆ. ನಂತರ ನಾಲ್ಕು ದಿನ ವಿರಾಮವಿರಲಿದ್ದು, ಜ.16 ರಂದು ಹೊಸಪೇಟೆಗೆ ತೆರಳುತ್ತೇವೆ. ಜ. 17 ರಂದು ಹೊಸಪೇಟೆ ಹಾಗೂ ಕೊಪ್ಪಳ 18 ರಂದು ಬಾಗಲಕೋಟೆ ಮತ್ತು ಗದಗ 19ರಂದು ಹಾವೇರಿ ಮತ್ತು ದಾವಣಗೆರೆಯಲ್ಲಿ ಯಾತ್ರೆ ನಡೆಯಲಿದೆ ಎಂದರು.
ಪ್ರತ್ಯೇಕವಾಗಿ ಮಾಹಿತಿ ನೀಡುತ್ತೇವೆ: 20 ರಂದು ವಿರಾಮ ದಿನ. 21ರಂದು ಹಾಸನ ಮತ್ತು ಚಿಕ್ಕಮಗಳೂರು, 22ರಂದು ಉಡುಪಿ ಮತ್ತು ದಕ್ಷಿಣ ಕನ್ನಡ, 23ರಂದು ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಪ್ರವಾಸ ನಡೆಯಲಿದೆ. 24 ರಂದು ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ನಡೆಯಲಿದೆ. 25 ವಿರಾಮದ ದಿನ. 26 ರಂದು ಮೈಸೂರು ಹಾಗೂ ಚಾಮರಾಜನಗರ, 27 ರಂದು ಮಂಡ್ಯ ಹಾಗೂ ರಾಮನಗರ, 28 ರಂದು ಯಾದಗಿರಿ ಹಾಗೂ ಬೀದರ್ ನಲ್ಲಿ ನಡೆಯಲಿದೆ. ಉಳಿದಂತೆ ಉತ್ತರ ಕನ್ನಡ, ರಾಯಚೂರು, ಕೊಡಗು ಹಾಗೂ ಬಳ್ಳಾರಿ ಭಾಗದ ಪ್ರವಾಸದ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.