ಕರ್ನಾಟಕ

karnataka

By

Published : Jul 6, 2023, 10:24 AM IST

Updated : Jul 6, 2023, 4:25 PM IST

ETV Bharat / state

Karnataka Budget 2023: ನಾಳೆ ಬಜೆಟ್‌- ಬೆಳಗಾವಿ ರೈತರ ಬೇಡಿಕೆ ಈಡೇರಿಸುತ್ತಾ ಸರ್ಕಾರ?

ಆಡಳಿತಾರೂಢ ಕಾಂಗ್ರೆಸ್​ ಸರ್ಕಾರದ ಬಜೆಟ್​ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಬೆಳಗಾವಿ ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಬೆಳಗಾವಿ ರೈತರ ಬೇಡಿಕೆಗಳು
ಬೆಳಗಾವಿ ರೈತರ ಬೇಡಿಕೆಗಳು

ಬೆಳಗಾವಿ ರೈತರ ಬೇಡಿಕೆ

ಬೆಳಗಾವಿ: ಐದು ಗ್ಯಾರಂಟಿ‌ ಯೋಜನೆಗಳನ್ನು ಘೋಷಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಜೆಟ್ ನಾಳೆ ಮಂಡನೆಯಾಗಲಿದೆ. ಈ ಬಜೆಟ್ ಮೇಲೆ ಬೆಳಗಾವಿ ಜಿಲ್ಲೆಯ ರೈತರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿಯಾದರೂ ನಮ್ಮ ಬೇಡಿಕೆ ಈಡೇರುತ್ತವೋ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.

ಬೆಳಗಾವಿ ರಾಜ್ಯದ ಎರಡನೇ ಅತೀ ದೊಡ್ಡ ಜಿಲ್ಲೆ. ರಾಜ್ಯದ ಎರಡನೇ ರಾಜಧಾನಿ ಅಂತಾನೂ ಕರೆಸಿಕೊಳ್ಳುತ್ತದೆ. ಇಲ್ಲಿನ ಜನರ ಬಹುತೇಕ ಕಸಬು ಕೃಷಿ. ಜಿಲ್ಲೆಯಲ್ಲಿ ಈ ಹಿಂದೆ ನೆರೆ ಇದೀಗ ಬರದಿಂದ ರೈತರು ನಷ್ಟದ ಸುಳಿಗೆ ಸಿಲುಕಿ ಪರದಾಡುತ್ತಿದ್ದಾರೆ. ಚುನಾವಣೆ ವೇಳೆ ನಾವು ರೈತಪರ ಎಂದು ಹೇಳಿ ಅಧಿಕಾರಕ್ಕೆ ಬರುವ ಪಕ್ಷಗಳು ಗೆದ್ದ ಮೇಲೆ ರೈತರತ್ತ ತಿರುಗಿಯೂ‌‌ ನೋಡುವುದಿಲ್ಲ ಎಂಬ ಆರೋಪವಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಈಟಿವಿ ಭಾರತ್ ಜೊತೆಗೆ ಮಾತನಾಡಿರುವ ರೈತರು, ಸರ್ಕಾರಕ್ಕೆ ಹತ್ತು ಹಲವು ಸಲಹೆ, ಬೇಡಿಕೆಗಳನ್ನು ಇರಿಸಿದ್ದಾರೆ.

ನೀರಾವರಿ ಯೋಜನೆಗಳು ಅಪೂರ್ಣ:ಸಪ್ತ ನದಿಗಳು ಹರಿಯುತ್ತಿದ್ದರೂ ಬೆಳಗಾವಿ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಈವರೆಗೂ ಆಳಿದ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಕಳಸಾ ಬಂಡೂರಿ, ಮಹಾದಾಯಿ ಯೋಜನೆಗೆ ಕೇಂದ್ರದಿಂದ ಡಿಪಿಆರ್ ಆಗಿದ್ದರೂ ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಮಲಪ್ರಭಾ ನದಿಯ 11 ಏತ ನೀರಾವರಿ ಯೋಜನೆಗಳು, ಕೃಷ್ಣಾ ನದಿಯ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ, ಖಿಳೇಗಾವ ಬಸವೇಶ್ವರ ಏತ ನೀರಾವರಿ ಯೋಜನೆ, ಅಮ್ಮಾಜೇಶ್ವರಿ, ಕೊಟ್ಟಲಗಿ ಹಾಗೂ ಘಟಪ್ರಭಾ ನದಿಯ ಘಟ್ಟಿ ಬಸವೇಶ್ವರ ಏತ ನೀರಾವರಿ ಯೋಜನೆ ಸೇರಿ ಇನ್ನಿತರ ಕಾಮಗಾರಿಗಳನ್ನು ಆರಂಭಿಸಿ, ಪೂರ್ಣಗೊಳಿಸಿ, ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂಬುದು ರೈತರ ಒತ್ತಾಯ.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡ ಪ್ರಕಾಶ ನಾಯಿಕ ಮಾತನಾಡಿ, "ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ದೂರದೃಷ್ಟಿಯ ಬಜೆಟ್ ಮಂಡಿಸಬೇಕು. ಕನಿಷ್ಠ ಮಟ್ಟದ, ಪ್ರಚಾರದ ಬಜೆಟ್ ಮಂಡಿಸಬಾರದು. ಕಳೆದ ಐದು ವರ್ಷಗಳಿಂದ ಸತತವಾಗಿ ಬರಗಾಲ, ನೆರೆ ಹಾವಳಿ, ಕೋವಿಡ್, ರಾಜಕೀಯ ಅತಂತ್ರತೆಯಿಂದಾಗಿ ರೈತ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾನೆ. ಏನೆನೋ ಉಚಿತ ಕಾರ್ಯಕ್ರಮಗಳನ್ನು ಕೊಡುತ್ತಿದ್ದೀರಿ, ಅದಕ್ಕಿಂತ ಪ್ರಮುಖವಾದದ್ದು, ಅನ್ನ ಬೆಳೆಯುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಅದೇ ರೀತಿ ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಎಪಿಎಂಸಿಗಳ ಮೂಲಕ ಸರ್ಕಾರ ಯೋಗ್ಯ ಬೆಲೆಯಲ್ಲಿ ಖರೀದಿ ಮಾಡಿ, ಮಾರಾಟ ಮಾಡುವ ವ್ಯವಸ್ಥೆ ಬಗ್ಗೆ ಬಜೆಟ್​ನಲ್ಲಿ ಜಾರಿಗೊಳಿಸಬೇಕು. ನಾಡಿನ ಭವಿಷ್ಯ ಮತ್ತು ರೈತರ ಆರ್ಥಿಕ ಭದ್ರತೆಗಾಗಿ ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ತರಬೇಕು" ಎಂದು ಆಗ್ರಹಿಸಿದರು.

ರೈತ ಸಂಘದ ಬೆಳಗಾವಿ ತಾಲೂಕಾಧ್ಯಕ್ಷ ಬಸವರಾಜ ಡೊಂಗರಗಾವಿ ಮಾತನಾಡಿ, "ಮಳೆ ಆಗದೇ ಬೆಳಗಾವಿ ಜಿಲ್ಲೆಯಾದ್ಯಂತ ರೈತರ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗುತ್ತಿವೆ. ರೈತರ ಗೋಳು ಯಾರೂ ಕೇಳುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರೈತರಿಗೆ ತಲುಪುವ ಒಳ್ಳೆಯ ಬಜೆಟ್ ಮಂಡಿಸಬೇಕೇ ಹೊರತು, ಕಾಟಾಚಾರದ ಬಜೆಟ್ ಮಂಡಿಸಬಾರದು. ಬ್ಯಾಂಕ್​ಗಳಿಂದ ಸಾಲ ವಸೂಲಾತಿ ತಕ್ಷಣವೇ ನಿಲ್ಲಿಸಬೇಕು" ಎಂದರು. ಜಿಲ್ಲೆಯ ಇನ್ನುಳಿದ ಬೇಡಿಕೆಗಳು ಹೀಗಿವೆ..

  • ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಬರಪೀಡಿತ ಎಂದು ಘೋಷಿಸಿ, ವಿಶೇಷ ಪ್ಯಾಕೇಜ್ ಮೂಲಕ ಬೆಳೆ ಹಾನಿಯಾದ ರೈತರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು.
  • ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯ ಮತ್ತು ಬೇರೆ ದೇಶಗಳ ಸಾಗಾಟಕ್ಕೆ ಕೃಷಿ ಉಡಾನ್ ಜಾರಿಗೊಳಿಸಬೇಕಿದೆ.
  • ಬೇಗ ಹಾಳಾಗುವ ಕೃಷಿ ಉತ್ಪನ್ನಗಳ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ಮತ್ತು ಸಂಸ್ಕರಣಾ ಘಟಕಗಳನ್ನು ತೆರೆಯಬೇಕು.
  • ಹೈನೋದ್ಯಮ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳ ತಯಾರಿಕಾ ಘಟಕ ನಿರ್ಮಾಣ ಆಗಬೇಕು.
  • ಬೆಳಗಾವಿಯ ಸರ್ಕಾರಿ ಎಪಿಎಂಸಿ ಸದೃಢಗೊಳಿಸಿ, ರೈತಸ್ನೇಹಿ ಮಾಡಬೇಕು.
  • ಜಾನುವಾರು ಮಾರುಕಟ್ಟೆ ಅಭಿವೃದ್ದಿಗೊಳಿಸಬೇಕು.
  • ಮಾವು, ದ್ರಾಕ್ಷಿ, ಗೋಡಂಬಿ ಸಂಸ್ಕರಣಾ ಘಟಕಗಳ ನಿರ್ಮಾಣ ಆಗಬೇಕು.
  • ಖಾನಾಪುರ ಪಶ್ಚಿಮ ಭಾಗದಲ್ಲಿ ಅರಣ್ಯ ಗೃಹ ಕೈಗಾರಿಕೆ ಆರಂಭಿಸಿ, ಅಲ್ಲಿನ ಜನರಿಗೆ ಉದ್ಯೋಗವಕಾಶ ಕಲ್ಪಿಸಬೇಕು. ಅರಣ್ಯ ನಾಶ ತಡೆಗಟ್ಟಬೇಕು.

ಕಬ್ಬು ಬೆಳೆಗಾರರಿಗೆ ಶಕ್ತಿ ತುಂಬಿ:ರಾಜ್ಯದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯಲ್ಲಿ 27 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಕಾರ್ಖಾನೆಗಳು ರಾಜಕಾರಣಿಗಳ ಹಿಡಿತದಲ್ಲಿದ್ದು, ಸಮರ್ಪಕ ಬೆಲೆ ಸಿಗದ ಕಾರಣ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್​ಆರ್​ಪಿ ದರ ಯಾವುದಕ್ಕೂ ಸಾಕಾಗುವುದಿಲ್ಲ‌. ಕರ್ನಾಟಕ ಕಬ್ಬು ಅಭಿವೃದ್ಧಿ ಮಂಡಳಿಯಲ್ಲಿ ಹೆಚ್ಚುವರಿ ದರ ನಿಗದಿಪಡಿಸಬೇಕು ಎಂದು ಕೂಗು ಕೇಳಿಬಂದಿದೆ.

"ಗುಜರಾತ್ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ 4,500 ರೂ. ನೀಡಬೇಕು. ಕಬ್ಬಿನಿಂದ ಬರುವ ಉಪ ಉತ್ಪನ್ನಗಳಾದ ಎಥನಾಲ್, ಕೋಜನ್, ಪ್ರಸಮಡ್, ಮೊಲ್ಯಾಸಿಸ್​ಗಳಿಂದ ಬರುವ ಲಾಭಾಂಶದಲ್ಲಿ 70:30 ಅನುಪಾತದಲ್ಲಿ ಲಾಭಾಂಶ ಕಬ್ಬು ಬೆಳೆಗಾರರಿಗೆ ಹಂಚಿಕೆ ಮಾಡಬೇಕು. 2022-23ನೇ ಸಾಲಿನಲ್ಲಿ ಸರ್ಕಾರವೇ ಆದೇಶ ಮಾಡಿದ ಪ್ರತಿ ಟನ್​ಗೆ ಹೆಚ್ಚುವರಿ 100 ರೂ. ಮತ್ತು ಎಥನಾಲ್ ಲಾಭಾಂಶದಲ್ಲಿ 50 ರೂ. ಕಾರ್ಖಾನೆಗಳಿಂದ ವಸೂಲಿ ಮಾಡಬೇಕು. ಕೂಡಲೇ ಕಬ್ಬು ಪೂರೈಸಿದ ರೈತರ ಖಾತೆಗಳಿಗೆ ಜಮೆ ಮಾಡಬೇಕು" ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ರಾಜ್ಯ ಸರ್ಕಾರಕ್ಕೆ ಪಂಚ ಗ್ಯಾರಂಟಿಗಳ ಹೊರೆ: 2023-24ನೇ ಸಾಲಿನ ಸಾಲದ ಸ್ಥಿತಿಗತಿ ಹೀಗಿದೆ..

Last Updated : Jul 6, 2023, 4:25 PM IST

ABOUT THE AUTHOR

...view details