ಬೆಳಗಾವಿ:ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಪುರುಷರ ಕಬಡ್ಡಿ ತಂಡದ ಯೂನಿವರ್ಸಿಟಿ ಬ್ಲೂ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ತಮಗೆ ಬೇಕಾದ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕ್ರೀಡಾಪಟುವೊಬ್ಬರು ಆರೋಪಿಸಿದ್ದಾರೆ. ಕಬಡ್ಡಿ ಆಯ್ಕೆ ಪ್ರಕ್ರಿಯೆಯನ್ನು ಕಳೆದ ನ.1 ಮತ್ತು 2 ರಂದು ವಿಜಯಪುರದಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ತಮಗೆ ಅನ್ಯಾಯವಾಗಿದೆ ಎಂದು ನೊಂದ ಕ್ರೀಡಾಪಟು ಕಾಂತು ಕೂಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತಜೊತೆಗೆ ಮಾತನಾಡಿದ ಅವರು, ''ನಾನು ಚೆನ್ನಾಗಿಯೇ ಆಡಿರುವೆ. ನನ್ನ ಆಟವನ್ನು ಪರಿಗಣಿಸದಯೇ ಅರ್ಹತೆ ಇಲ್ಲದವರನ್ನು ಆಯ್ಕೆ ಮಾಡಿದ್ದಾರೆ. ಕಾರಣ ನೀಡದೇ ನನ್ನನ್ನು ಕೈಬಿಟ್ಟಿದ್ದಾರೆ. ಅಲ್ಲದೆ, ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಂಡು ನನ್ನಂಥ ಅನೇಕ ಬಡ ಪ್ರತಿಭಾನ್ವಿತ ಆಟಗಾರರಿಗೆ ಅನ್ಯಾಯ ಎಸಗಿದ್ದಾರೆ. ಈ ಪ್ರಕ್ರಿಯೆ ರದ್ದುಪಡಿಸಿ, ಬೇರೆ ಆಯ್ಕೆ ಸಮಿತಿ ರಚನೆ ಮಾಡಿ ಮುಂದಿನ ಕಬಡ್ಡಿ ತಂಡದ ಆಯ್ಕೆ ಪ್ರಕ್ರಿಯೆಯನ್ನು ಚಿತ್ರೀಕರಣ ಸಹಿತವಾವಿ ಮತ್ತು ಪಾರದರ್ಶಕವಾಗಿ ನಡೆಸುವಂತೆ ಒತ್ತಾಯಿಸಿದರು.
ವೀಕ್ಷಕ ವರದಿಗಾರ ಸೋಮಶೇಖರ ಭಜಂತ್ರಿ ಮಾತನಾಡಿ, ಆಯ್ಕೆಗಾರರು ಫೋನಿನಲ್ಲಿ ಮಾತಾಡುವುದು, ಚಾಟಿಂಗ್ ಮಾಡುವುದರಲ್ಲೇ ಬ್ಯುಸಿ ಆಗಿದ್ದರು. ಅವರು ಸರಿಯಾಗಿ ಆಟಗಾರರ ಪ್ರದರ್ಶನ ವೀಕ್ಷಿಸದೇ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಇದರಿಂದ ಉತ್ತರಕರ್ನಾಟಕದ ಅನೇಕ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸುಮಾರು 20 ಕಬಡ್ಡಿ ಆಟಗಾರರಿಗೆ ಯೂನಿವರ್ಸಿಟಿ ಬ್ಲೂ ಆಯ್ಕೆಯಲ್ಲಿ ಅನ್ಯಾಯವಾಗಿದೆ. ಹಾಗಾಗಿ, ಮರು ಆಯ್ಕೆ ಪ್ರಕ್ರಿಯೆ ನಡೆಸುವಂತೆ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ದೈಹಿಕ ನಿರ್ದೇಶಕರಿಗೆ ಮನವಿ ಮಾಡಿದ್ದೇವೆ. ಆದರೆ, ಅವರು ಕೇವಲ ಭರವಸೆ ನೀಡುತ್ತಿದ್ದಾರೆ ಹೊರತು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ನ್ಯಾಯ ಸಿಗೋವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.