ಬೆಳಗಾವಿ: ಮಾಧ್ಯಮಗಳು ಕೇಳಿದ್ದ ಪ್ರಶ್ನೆಗೆ ಕರವೇ ನಾರಾಯಣಗೌಡ ಯಾರು ಎಂದು ಪ್ರಶ್ನಿಸಿದ್ದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರ ಕಾರಿಗೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಮುಗಿಸಿ ಹೊರಬಂದ ಡಾ. ಕೆ.ಸುಧಾಕರ್‌ಗೆ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಸಚಿವ ಕೆ.ಸುಧಾಕರ್ ಅವರ ಮುಂದೆಯೇ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆಗ ಮಾತನಾಡಿದ ಸುಧಾಕರ್, ನಿಪ್ಪಾಣಿಯಲ್ಲಿ ನಾನು ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ ಎಂದರು.
ಸಚಿವ ಸುಧಾಕರ್‌ಗೆ ಕರವೇ ಕಾರ್ಯಕರ್ತರ ಮುತ್ತಿಗೆ ಇದಕ್ಕೆ ಕರವೇ ಕಾರ್ಯಕರ್ತರು ನಾಳೆ ಎಂಇಎಸ್‌ನವರು ಕರೆದರೆ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀರಾ ಎಂದು ಪ್ರಶ್ನಿಸಿದರು. ನಾರಾಯಣಗೌಡ ಯಾರು ಅಂತಾ ಕೇಳಿದ್ದೀರಲ್ಲಾ ಎಂದು ಕಾರ್ಯಕರ್ತರು ಗರಂ ಆದರು.
ಆಗ ಡಾ.ಕೆ ಸುಧಾಕರ್ ನಾರಾಯಣಗೌಡ ರಾಜೀನಾಮೆಗೆ ಆಗ್ರಹಿಸಿದ್ದಾರೆಂದು ಮಾಧ್ಯಮದವರು ಪ್ರಶ್ನೆ ಕೇಳಿದ್ರು, ನಾನು ಯಾರು ನಾರಾಯಣಗೌಡ ಗೊತ್ತಿಲ್ಲಪ್ಪಾ ಎಂದೆ. ಕರ್ನಾಟಕದಲ್ಲಿ ಎಷ್ಟು ಜನ ನಾರಾಯಣಗೌಡರು ಇದಾರೆ, ಯಾರು ಹೇಳಿ ಎನ್ನುತ್ತಿದಂತೆ ಈ ವೇಳೆ ಕರವೇ ಕಾರ್ಯಕರ್ತರು ಮತ್ತೆ ಘೋಷಣೆ ಕೂಗಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಚಿವರು ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದರು.