ಚಿಕ್ಕೋಡಿ:ಸರ್ಕಾರ ರಚನೆಯಾಗಲು ಕಾಂಗ್ರೆಸ್ನಿಂದ ನಮ್ಮ ಪಕ್ಷಕ್ಕೆ ಬಂದು ಮತ್ತೆ ಚುನಾವಣೆ ಎದುರಿಸಿ ಗೆದ್ದವರಿಗೆ ನ್ಯಾಯ ಕೊಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಳತಗಾ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನೇಕ ಶಾಸಕರಿಗೆ ಅಸಮಾಧಾನ ಇದ್ದರೂ ಕೂಡ ನಮ್ಮ ಮುಖ್ಯಮಂತ್ರಿ ಹಾಗೂ ರಾಷ್ಟ್ರೀಯ ನಾಯಕರು ಅವರೆಲ್ಲರನ್ನು ಸಮಾಧಾನ ಮಾಡಿ, ಯೋಗ್ಯ ಸಮಯ ಬಂದಾಗ ಯೋಗ್ಯ ಅವಕಾಶ ಒದಗಿಸುತ್ತಾರೆ ಎಂದರು.
ಸಿಡಿ ಬಹಿರಂಗ ಪಡಿಸುವುದಾಗಿ ಹೇಳಿಕೆ ನೀಡಿದ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಮೊದಲಿನಿಂದಲೂ ಈ ರೀತಿಯ ಹೇಳಿಕೆಗಳನ್ನೇ ಕೊಡ್ತಾ ಇದ್ದಾರೆ. ಅವರು ಯಾವಾಗ ಬಹಿರಂಗಪಡಿಸುತ್ತಾರೋ ಅದಕ್ಕೆಲ್ಲರೂ ತಯಾರಿದ್ದಾರೆ. ಮೊದಲು ಬಹಿರಂಗಪಡಿಸಲಿ, ಅದರಲ್ಲಿ ತಪ್ಪುಗಳಿದ್ದರೆ ನಮ್ಮ ನಾಯಕರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.