ಬೆಳಗಾವಿ: "ಜೀವ ಜಗತ್ತಿನಲ್ಲಿ ಮಹಿಳೆಯೇ ಶ್ರೇಷ್ಠ ಎಂದಿದ್ದರೂ ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಶೋಷಿತ ಸಮುದಾಯಗಳೂ ಹೊರತಾಗಿಲ್ಲ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕಿದ್ದರೆ ಶೋಷಿತ ಸಮುದಾಯಗಳು ಸುಶಿಕ್ಷಿತರಾಗಬೇಕು. ಆಗ ಮಾತ್ರ ಶಾಹುಮಹಾರಾಜರು ಮತ್ತು ಮಹಾತ್ಮಾ ಫುಲೆ ದಂಪತಿಯ ಕನಸು ನನಸಾಗಿಸಲು ಸಾಧ್ಯ" ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಪಟ್ಟರು. ಬೆಳಗಾವಿಯ ಕುಮಾರ ಗಂಧರ್ವ ಕಲಾಭವನದಲ್ಲಿ ಛತ್ರಪತಿ ಶಾಹುಮಹಾರಾಜರ 144ನೇ ಜಯಂತಿ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಆಯೋಜಿಸಿದ್ದ 'ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕಾಗಿ ಸಂಕಲ್ಪ ಸಮಾವೇಶದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
"ಬಿಳಿ ಮತ್ತು ಕಪ್ಪು ಬಣ್ಣದ ಬಗ್ಗೆ ಇಂದು ತೀವ್ರ ಚರ್ಚೆ ನಡೆಯುತ್ತಿದೆ. ಕಪ್ಪು ಈ ದೇಶದ ಮೂಲ ಬಣ್ಣ. ಕಪ್ಪು ಬಣ್ಣದ ದ್ರಾವಿಡರೇ ಮೂಲ ಭಾರತೀಯರು. ಅಂತಹ ದ್ರಾವಿಡರೆನಿಸಿಕೊಂಡಿರುವ ಶೋಷಿತ ಸಮುದಾಯಗಳು ಶಾಹು ಮಹಾರಾಜರು, ಡಾ.ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮಾ ಫುಲೆ ಅವರ ಆದರ್ಶಗಳನ್ನು ಅರಿತುಕೊಂಡು ಸ್ವಾಭಿಮಾನ, ಘನತೆಯ ಜೀವನ ನಡೆಸಬೇಕು" ಎಂದು ಕರೆ ಕೊಟ್ಟರು.
"ಬೆಳಗಾವಿ, ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶೇ. 45ಕ್ಕೂ ಅಧಿಕ ಸಂಖ್ಯೆಯಷ್ಟು ಎಸ್ಸಿ, ಎಸ್ಟಿ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ. ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಶೋಷಿತ ಸಮುದಾಯಗಳು ಮತ್ತೆ ಅನ್ಯಾಯದ ಚಕ್ರಕ್ಕೆ ಸಿಲುಕಬೇಕಾಗುತ್ತದೆ. ಭಾರತ ಬದಲಾಗುವುದು ದೇವಸ್ಥಾನ, ಚರ್ಚ್, ಮಸೀದಿಗಳಿಂದಲ್ಲ. ಡಾ.ಬಾಬಾಸಾಹೇಬ ಅಂಬೇಡ್ಕರ್ ಕೊಟ್ಟ ಮತದಾನದ ಹಕ್ಕಿನಿಂದ ಬದಲಾವಣೆ ಸಾಧ್ಯ. ಬಾಬಾ ಸಾಹೇಬರ ಲೇಖನಿಯಿಂದ ಭಾರತ ಬದಲಾಗಿದೆ" ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ, "ಯಾವ ನೆಲದಲ್ಲಿ ನಮ್ಮ ಹಕ್ಕು ಕಳೆದುಕೊಂಡಿದ್ದೇವೆಯೋ, ಧ್ವನಿ ಕಳೆದುಕೊಂಡಿದ್ದೇವೋ ಅದೇ ನೆಲದಲ್ಲಿ ಎದ್ದು ನಿಲ್ಲುವ ಸಂಕಲ್ಪ ಮಾಡಬೇಕು. ಮೂಢನಂಬಿಕೆಗಳನ್ನು ಬದಿಗಿಟ್ಟು ಪುಸ್ತಕ ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ದೇಶ ಕಟ್ಟಿದ ಶೂದ್ರರ ತಲೆಯಲ್ಲಿ ಮೂಢನಂಬಿಕೆಗಳನ್ನು ತುಂಬಿದ ಪರಿಣಾಮವೇ ಮೂಲನಿವಾಸಿಗಳು ತಮ್ಮತನ ಕಳೆದುಕೊಳ್ಳುವಂತಾಯಿತು".