ಬೆಳಗಾವಿ : ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಆಗ್ರಹಿಸಿದರು. ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುನಿಗಳು ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಪೊಲೀಸರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಮೂಲಕ ಜೈನ ಸಮುದಾಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ತನಿಖೆ ಅನುಮಾನ ಮೂಡಿಸುವಂತಿದೆ. ಹಾಗಾಗಿ ಸಿಬಿಐಗೆ ವಹಿಸಿ ಪಾರದರ್ಶಕವಾಗಿ ತನಿಖೆ ಕೈಗೊಳ್ಳಬೇಕು ಎಂದು ಹೇಳಿದರು.
ಮುನಿಗಳ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಪೊಲೀಸರು ಹಿಂದೇಟು ಹಾಕುತ್ತಾರೆ. ಆದರೆ, ಸ್ವಾಮೀಜಿ ಹಣಕಾಸಿನ ವ್ಯವಹಾರ ಮಾಡಿದ್ದಾರೆ ಎಂದು ಹೇಳಲು ಅವರು ಹಿಂಜರಿಯುತ್ತಿಲ್ಲ. ಈ ರೀತಿ ಪೊಲೀಸರು ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಂದು ಧರ್ಮದ ತುಷ್ಟೀಕರಣ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ :ಮುನಿಗಳ ಹತ್ಯೆ ಖಂಡನೀಯ, ಇತರೆ ಮುನಿಗಳಿಗೆ ಸರ್ಕಾರ ರಕ್ಷಣೆ ಒದಗಿಸಬೇಕು: ಡಾ.ಡಿ.ವೀರೇಂದ್ರ ಹೆಗ್ಗಡೆ
ಜೈನ ಸಮುದಾಯದ ಯಾವುದೇ ಮುನಿಗಳು ಎಂದಿಗೂ ಹಣ ಮುಟ್ಟುವುದಿಲ್ಲ ಮತ್ತು ಹಣಕಾಸಿನ ವ್ಯವಹಾರ ಮಾಡುವುದಿಲ್ಲ. ಆಶ್ರಮದ ಟ್ರಸ್ಟಿಗಳು ಅದನ್ನು ನಿರ್ವಹಿಸುತ್ತಾರೆ. ಆದರೆ, ಮುನಿಗಳ ಕುರಿತಾಗಿ ನಿರ್ದಿಷ್ಟವಾದ ಹೇಳಿಕೆ ನೀಡುವಂತೆ ಸ್ಥಳೀಯರಿಗೆ ಪೊಲೀಸರು ಒತ್ತಡ ಹಾಕುತ್ತಿರುವ ನಡೆ ಸರಿಯಲ್ಲ. ಸದನದಲ್ಲಿ ಸೋಮವಾರ ಈ ಬಗ್ಗೆ ಧ್ವನಿ ಎತ್ತುತ್ತೇನೆ ಎಂದು ಅಭಯ ಪಾಟೀಲ್ ತಿಳಿಸಿದರು.