ಬೆಳಗಾವಿ:ಮಹಾದಾಯಿ ವಿಚಾರವಾಗಿ ಕರ್ನಾಟಕ ಹಾಗೂ ಗೋವಾ ರಾಜ್ಯದ ಮುಖ್ಯಮಂತ್ರಿಗಳು ಸೌಹಾರ್ದತೆಯಿಂದ ಕುಳಿತು ಮಾತುಕತೆ ನಡೆಸಿದ್ರೆ ಮಾತ್ರ ವಿವಾದ ಇತ್ಯರ್ಥ ಸಾಧ್ಯ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟ ಬೆಳಗಾವಿಯ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದಾಯಿ ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಕರ್ನಾಟಕ ಹಾಗೂ ಗೋವಾ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ಇಲ್ಲಿ ಕಾನೂನಿನ ಸೂಕ್ಷ್ಮತೆಗಳಿವೆ. ಉಭಯ ರಾಜ್ಯಗಳ ಸಿಎಂಗಳು ಒಂದೇ ಕಡೆ ಕುಳಿತು ಸೌಹಾರ್ದಯುತ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಇದರ ಜೊತೆಗೆ ಮೇಲ್ಮನವಿ ಅರ್ಜಿಗಾಗಿ ಕಾನೂನು ಹೋರಾಟ ನಡೆಸಬೇಕು. ಈ ಎರಡಕ್ಕೂ ರಾಜ್ಯದ ಬಿಜೆಪಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಮೇಲ್ಮನವಿ ಅರ್ಜಿ ಇರುವ ಕಾರಣ ಕೇಂದ್ರ ಸರ್ಕಾರಕ್ಕೆ ನೋಟಿಫಿಕೇಶನ್ ಹೊರಡಿಸಲು ಸಾಧ್ಯವಾಗುತ್ತಿಲ್ಲ. ಕಾನೂನು ಸೂಕ್ಷ್ಮತೆ ಮೀರಿ ಕೆಲಸ ಮಾಡಬೇಕಾದ ಅಗತ್ಯತೆ ಇದೆ. ಇದಕ್ಕಾಗಿ ಉಭಯ ರಾಜ್ಯಗಳ ಸಿಎಂಗಳ ಭೇಟಿ ಅತ್ಯವಶ್ಯಕವಾಗಿದೆ. ಗೋವಾ ಕಾಂಗ್ರೆಸ್ ನಾಯಕರು ಯೋಜನೆಗೆ ವಿರೋಧಿಸಿದ್ರೆ ಇಲ್ಲಿಯವರು ಯೋಜನೆ ಜಾರಿಗೆಗೆ ಆಗ್ರಹಿಸುತ್ತಾರೆ. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ಸಂಬಂಧ ಒಂದೇ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ರೆ ಈ ವಿವಾದ ರಾಜಕೀಯ ತಿರುವು ಪಡೆಯುತ್ತದೆಯೇ ಹೊರತು ಸಮಸ್ಯೆ ಬಗೆಹರಿಯಲ್ಲ ಎಂದರು.
ನೆರೆ ಸಂತ್ರಸ್ತ ರೈತರಿಗೆ ಸಾಲ ಮರುಪಾವತಿ ಸಂಬಂಧ ನೋಟಿಸ್ ನೀಡದಂತೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲ ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ಆದೇಶ ಮೀರಿ ಬ್ಯಾಂಕ್, ಸಹಕಾರ ಸಂಘಗಳು ನೋಟಿಸ್ ಕೊಟ್ರೆ ತಕ್ಷಣವೇ ಕ್ರಮ ಜರುಗಿಸಲಾಗುವುದು. ಈ ಕುರಿತು ಕ್ಯಾಬಿನೆಟ್ನಲ್ಲಿ ಚರ್ಚಿಸುತ್ತೇನೆ. ಮುಖ್ಯಮಂತ್ರಿ ಗಮನಕ್ಕೂ ತರುತ್ತೇನೆ. ಪ್ರವಾಹ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡುವ ಸಂಬಂಧ ಡಿಸಿ ಜತೆಗೆ ಚರ್ಚಿಸಿ ತಕ್ಷಣವೇ ಕ್ರಮವಹಿಸುತ್ತೇನೆ ಎಂದರು.
ಸುವರ್ಣ ಸೌಧಕ್ಕೆ ಕಚೇರಿಗಳ ಸ್ಥಳಾಂತರ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿದೆ. ಅಂತಿಮ ಹಂತದ ತೀರ್ಮಾನ ಕೈಗೊಳ್ಳಲಾಗುವುದೊಂದೆ ಬಾಕಿ ಇದೆ.
ಸುವರ್ಣಸೌಧದಲ್ಲಿ ಸರ್ಕಾರದ ಸಭೆ, ಅಧಿಕಾರಿಗಳ ಸಭೆ ನಡೆಯಬೇಕು. ಸಚಿವ ಕೆ.ಎಸ್. ಈಶ್ವರಪ್ಪನವರೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಭೆಯನ್ನು ಸುವರ್ಣ ಸೌಧದಲ್ಲಿ ನಡೆಸಿದ್ದರು. ಇನ್ನು ಮುಂದೆಯೂ ಸಭೆ ನಡೆಸಲಾಗುವುದು ಎಂದರು.