ಬೆಳಗಾವಿ: ಈಗಾಗಲೇ ಮಾಜಿ ಸಚಿವ, ಹಾಲಿ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಹಿರಂಗವಾಗಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸುತ್ತೇನೆ ಎಂದು ಸವಾಲು ಹಾಕಿರುವ ಬೆನ್ನಲ್ಲೇ, ಕೆಲವು ಪಂಚಮಸಾಲಿ ಮುಖಂಡರು ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕಣಕ್ಕೆ ಇಳಿಸುವಂತೆ ಸಮುದಾಯದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಧರಣಿ ಸತ್ಯಾಗ್ರಹದಲ್ಲಿ ಗೋಕಾಕ್ ಮೂಡಲಗಿ ವಿಧಾನಸಭಾ ಕ್ಷೇತ್ರದ ಪಂಚಮಸಾಲಿ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಬಹಿರಂಗವಾಗಿ ಬಿಜೆಪಿ ಸರ್ಕಾರದ ವಿರುದ್ಧ ಅವರು ತಮ್ಮ ಆಕ್ರೋಶವನ್ನು ಹೊರಹಾಕಿ, ಈ ಬಾರಿ ಬಿಜೆಪಿ ಸರ್ಕಾರಕ್ಕೆ ತಕ್ಕ ಉತ್ತರ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ, ಪಂಚಮಸಾಲಿ ಸಮಾಜದ ಮುಖಂಡೆ ಮತ್ತು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಬಹಿರಂಗವಾಗಿ ಸವಾಲನ್ನು ಹಾಕಿದ್ದಾರೆ. ಪಂಚಮಸಾಲಿ ಸಮಾಜ ಈ ಸವಾಲನ್ನು ಎದುರಿಸಲು ಹಾಗೂ ನಮ್ಮ ಶಕ್ತಿಯನ್ನು ತೋರಿಸಲು ಇದೊಂದು ಒಳ್ಳೆಯ ಅವಕಾಶ. ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ರಮೇಶ ಜಾರಕಿಹೊಳಿ ವಿರುದ್ಧ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕಣಕ್ಕಿಳಿಸಿ ಗೆಲುವು ಸಾಧಿಸೋಣ. ನಾವೆಲ್ಲರೂ ಒಗ್ಗಟ್ಟಾಗಿ ಪಕ್ಷಬೇಧ ಮರೆತು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಗೆಲುವಿಗೆ ಪ್ರಯತ್ನ ಮಾಡುತ್ತೇವೆ ಎಂದು ಗೋಕಾಕ್ ಜೆಡಿಎಸ್ ಮುಖಂಡ ಚಂದ್ರಣ್ಣ ಗಿಡ್ಡಣ್ಣವರ್ ಭಾಷಣದಲ್ಲಿ ಶ್ರೀಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.