ಚಿಕ್ಕೋಡಿ : ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕೃಷ್ಣಾ ನದಿಯ ಉಪನದಿಗಳಾದ ದೂದ್ಗಂಗಾ ಹಾಗೂ ವೇದಗಂಗಾ ನದಿ ನೀರಿನಲ್ಲೂ ಏರಿಕೆಯಾಗಿದೆ. ಹೀಗಾಗಿ ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಮುಳಗಡೆಯಾಗಿವೆ.
ಕೃಷ್ಣಾ ನದಿ ನೀರಿನ ಒಳ ಹರಿವಿನ ಪ್ರಮಾಣ 1 ಲಕ್ಷ 40 ಸಾವಿರಕ್ಕಿಂತ ಹೆಚ್ಚು ಕ್ಯುಸೆಕ್ ದಾಖಲಾಗಿದ್ದು, ಹಿಪ್ಪರಗಿ ಬ್ಯಾರೇಜ್ನಿಂದ 1 ಲಕ್ಷ 15 ಸಾವಿರ ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ.
ರಾಯಭಾಗ ಹಾಗೂ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಜಲಾವೃತವಾಗಿದ್ದು, ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುಡಚಿ - ಉಗಾರ, ಕಲ್ಲೋಳ - ಯಡೂರ ಸೇತುವೆ ಜಲಾವೃತವಾಗಿವೆ. ದೂದ್ಗಂಗಾ-ವೇದಗಂಗಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಬೋಜ, ಭೋಜವಾಡಿ-ಕುನ್ನೂರ, ಜತ್ರಾಟ-ಭೀವಸಿ, ಮಲಿಕವಾಡ-ದತ್ತವಾಡ, ಸಿದ್ನಾಳ-ಅಕ್ಕೋಳ ಸೇತುವೆಗಳೂ ಜಲಾವೃತವಾಗಿವೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ 14 ಗ್ರಾಮಗಳ ಸಂಪರ್ಕ ಸೇತುವೆಗಳು ಜಲಾವೃತವಾಗಿದ್ದು, ಜನರು ಪರ್ಯಾಯ ಮಾರ್ಗಗಳಿಂದ ಸಂಚರಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾಡಳಿತದಿಂದ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಇನ್ನೂ ಮೂರು ದಿನ ಮಳೆ ಮುಂದುವರಿಯಲಿರುವುದರಿಂದ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.