ಬೆಳಗಾವಿ(ಚಿಕ್ಕೋಡಿ): ಗಡಿಜಿಲ್ಲೆಯಲ್ಲಿ ಮಳೆರಾಯನ ರೌದ್ರನರ್ತನ ಮುಂದುವರೆದಿದ್ದು, ನಗರದ ಹೊರವಲಯದಲ್ಲಿರುವ ಕಂಗ್ರಾಳಿ ಕೆ.ಎಚ್ ಬಳಿ ಹಾದು ಹೋಗಿರುವ ಮಾರ್ಕಂಡೇಯ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಬೆಳಗಾವಿಯಲ್ಲಿ ವರುಣನ ಆಟಾಟೋಪ: ತುಂಬಿ ಹರಿಯುತ್ತಿದೆ ಮಾರ್ಕಂಡೇಯ ನದಿ - ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ
ಕಳೆದೆರೆಡು ದಿನಗಳಿಂದ ಮಾರ್ಕಂಡೇಯ ನದಿಗೆ ನೀರಿನ ಒಳಹರಿವು ಹೆಚ್ಚಾಗಿದ್ದು, ನದಿ ಪಕ್ಕದಲ್ಲಿರುವ ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಹಾಗೂ ಭತ್ತದ ಗದ್ದೆ ಸಂಪೂರ್ಣ ಜಲಾವೃತವಾಗಿವೆ.
ತಾಲೂಕಿನ ಕಂಗ್ರಾಳಿ ಕೆ.ಎಚ್.,ಅಲತಗಾ, ಕೇಸನೂರ, ಕಡೋಲಿ ಸೇರಿದಂತೆ ಇತರ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಕಳೆದ ಹಲವು ದಿನಗಳಿಂದ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಧಾರಾಕಾರ ಮಳೆ ಹಿನ್ನೆಲೆ ಜಿಲ್ಲೆಯ ಬಹುತೇಕ ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ಹೀಗಾಗಿ ಈ ಮೂರು ಗ್ರಾಮಗಳ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಇತ್ತ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಧಾನಗರ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 4 ಗೇಟ್ ಮೂಲಕ 7,000 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪಂಚಗಂಗಾ ನದಿಯಿಂದ ಸುಮಾರು 98 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ. ಹಲವು ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, 4 ಎನ್‌ಡಿಆರ್‌ಎಫ್ ತಂಡಗಳು ಆಗಮಿಸಿವೆ.